ಹವಾಮಾನ ಬಿಕ್ಕಟ್ಟು ಹಿನ್ನಲೆ ಪರಮಾಣು ಇಂಧನಕ್ಕೆ ಹೆಚ್ಚಿದ ಬೆಂಬಲ

ಸಾಂದರ್ಭಿಕ ಚಿತ್ರ:PTI
ಲಂಡನ್, ನ.7: ಹವಾಮಾನ ಬಿಕ್ಕಟ್ಟು, ತಾಪಮಾನ ಬದಲಾವಣೆಯ ಸವಾಲು ಹಾಗೂ ಇದಕ್ಕೆ ಪರಿಹಾರೋಪಾಯ ರೂಪಿಸಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸುವ ಜಾಗತಿಕ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ, ಶುದ್ಧ ಇಂಧನವಾಗಿ ಗುರುತಿಸಿಕೊಂಡಿರುವ ಪರಮಾಣು ಇಂಧನದ ಪರವಾದ ಅಭಿಪ್ರಾಯ ಪ್ರಬಲವಾಗಿ ಮೂಡಿಬಂದಿದೆ.
ಚೆರ್ನೋಬಿಲ್, ಫುಕುಶಿಮ ಅಣುಸ್ಥಾವರದ ದುರಂತಗಳು, ಪರಮಾಣು ತ್ಯಾಜ್ಯದ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ ಹಲವು ದಶಕಗಳಿಂದಲೂ ಹವಾಮಾನಕ್ಕೆ ಸಂಬಂಧಿಸಿದ ಜಾಗತಿಕ ಅಧಿವೇಶನಗಳಲ್ಲಿ ಪರಮಾಣು ಇಂಧನದ ಪ್ರತಿಪಾದಕರು ಹಾಗೂ ಬೆಂಬಲಿಗರಿಗೆ ಹಿನ್ನಡೆಯಾಗುತ್ತಿತ್ತು. ಆದರೆ ಪರಮಾಣು ಇಂಧನ ಶುದ್ಧ ಇಂಧನದ ರೂಪದಲ್ಲಿರುವುದರಿಂದ ಹವಾಮಾನ ಬಿಕ್ಕಟ್ಟು ನಿಯಂತ್ರಣಕ್ಕೆ ಇದು ಸೂಕ್ತ ಎಂಬ ಅಭಿಪ್ರಾಯ ಲಂಡನ್ನ ಗ್ಲಾಸ್ಗೋದಲ್ಲಿ ಕಳೆದ ವಾರ ಮುಕ್ತಾಯಗೊಂಡ ಸಿಒಪಿ26 ಸಮಾವೇಶದಲ್ಲಿ ವ್ಯಕ್ತವಾಗಿದೆ.
ಪರಮಾಣು ಇಂಧನ ಜಾಗತಿಕ ತಾಪಮಾಣ ಹೆಚ್ಚಳದ ಸಮಸ್ಯೆಯ ಪರಿಹಾರ ಸೂತ್ರದ ಒಂದು ಪ್ರಮುಖ ಭಾಗವಾಗಿದೆ. ಈ ಬಗ್ಗೆ ಸಂಶಯವೇ ಇಲ್ಲ ಎಂದು ಅಂತರಾಷ್ಟ್ರೀಯ ಪರಮಾಣು ಇಂಧನ ಮಂಡಳಿಯ(ಐಇಎ) ಪ್ರಧಾನ ನಿರ್ದೇಶಕ ರಫೇಲ್ ಮಾರಿಯಾನೊ ಗ್ರಾಸಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇಂಗಾಲ ಮುಕ್ತ, ಶುದ್ಧ ಇಂಧನವಾಗಿ ವಿಶ್ವದೆಲ್ಲೆಡೆ ಈಗಾಗಲೇ ಗುರುತಿಸಿಕೊಂಡಿರುವ ಪರಮಾಣು ಇಂಧನದ ಕುರಿತ ಚರ್ಚೆ ಇದೇ ಮೊದಲ ಬಾರಿಗೆ ಜಾಗತಿಕ ಹವಾಮಾನ ಸಮಾವೇಶದಲ್ಲಿ ನಡೆದಿದೆ. ಗಾಳಿ ಬದಲಾಗುತ್ತಿದೆ ಎಂದವರು ಹೇಳಿದ್ದಾರೆ.
ಒಂದು ದಶಕದೊಳಗೆ ಜಾಗತಿಕ ಹಸಿರುಮನೆ ಹೊರಸೂಸುವಿಕೆಯನ್ನು ಕನಿಷ್ಟ ಅರ್ಧಾಂಶದಷ್ಟು ಕಡಿಮೆಗೊಳಿಸಿದರೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್ಗೆ ಸೀಮಿತಗೊಳಿಸುವ ಗುರಿಯಡೆಗೆ ಕನಿಷ್ಟ 50% ಮುನ್ನಡೆ ಸಾಧಿಸಿದಂತಾಗುತ್ತದೆ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ ಈಗಲೂ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆಯುತ್ತಿದೆ. 2021ರಲ್ಲಿ ಹಸಿರುಮನೆ ಹೊರಸೂಸುವಿಕೆ ಪ್ರಮಾಣ ದಾಖಲೆ ಮಟ್ಟ ತಲುಪಿದೆ ಎಂದು ವರದಿಯೊಂದು ತಿಳಿಸಿದೆ. 2023ರ ವೇಳೆ ಈ ಅಪಾಯ ಮತ್ತಷ್ಟು ಗರಿಷ್ಟ ಮಟ್ಟ ತಲುಪಲಿದೆ ಎಂದು ಐಇಎ ಎಚ್ಚರಿಸಿದೆ.
2015ರ ಪ್ಯಾರಿಸ್ ಹವಾಮಾನ ಸಮಾವೇಶದಲ್ಲಿ ಪರಮಾಣು ಕುರಿತ ವಿಷಯಕ್ಕೆ ಪ್ರಾಧಾನ್ಯತೆ ಇರಲಿಲ್ಲ. ಅದರ ಅಗತ್ಯವಿಲ್ಲ ಎಂಬ ನಂಬಿಕೆಯಿತ್ತು. ಆದರೆ ಈಗ ಹಲವು ರಾಷ್ಟ್ರಗಳು , ವಿಶೇಷವಾಗಿ ಅನಿಲ ಇಂಧನದ ವೆಚ್ಚವನ್ನು ಗಮನಿಸಿ, ಪರಮಾಣು ಇಂಧನದ ಕಾರ್ಯಸಾಧ್ಯತೆಯ ಬಗ್ಗೆ ಗಮನ ಹರಿಸಲು ಆರಂಭಿಸಿದ್ದಾರೆ ಎಂದು ಪರಮಾಣು ಇಂಧನ ಸಂಸ್ಥೆಯ ಅಧಿಕಾರಿ ಕಲಮ್ ಥಾಮಸ್ ಹೇಳಿದ್ದಾರೆ.







