ದಿಲ್ಲಿಯಲ್ಲಿ ಗಂಭೀರ ಹಂತ ತಲುಪಿದ ವಾಯು ಮಾಲಿನ್ಯ

ಹೊಸದಿಲ್ಲಿ, ನ. 7: ಹೊಸದಿಲ್ಲಿಯಲ್ಲಿ ರವಿವಾರ ಸಂಜೆ ವಾಯು ಗುಣಮಟ್ಟ ಸೂಚ್ಯಂಕ 432 (ಅತ್ಯಧಿಕ ತೀವ್ರ ಶ್ರೇಣಿ) ದಾಖಲಾಗಿದೆ ಎಂದು ಕೇಂದ್ರ ಸರಕಾರ ನಡೆಸುತ್ತಿರುವ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರಾಕಾಸ್ಟಿಂಗ್ ಆ್ಯಂಡ್ ರಿಸರ್ಚ್ ಹೇಳಿದೆ. ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ ಉತ್ತರಪ್ರದೇಶದ ನೋಯ್ಡಾದಲ್ಲಿ ಕೂಡ ರವಿವಾರ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ತೀವ್ರ ಶ್ರೇಣಿಯಲ್ಲಿ ದಾಖಲಾಗಿದೆ.
ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ದಹನ, ಪ್ರತಿಕೂಲ ವಾಯು ವೇಗ ಹಾಗೂ ನಗರದಲ್ಲಿ ವಾಹನಗಳು ಉಗುಳುವ ಹೊಗೆಯ ಕಾರಣದಿಂದ ದಿಲ್ಲಿಯಲ್ಲಿ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ವಾಯು ಮಾಲಿನ್ಯ ಉಂಟಾಗುತ್ತದೆ. ಬೆಳೆ ತ್ಯಾಜ್ಯ ದಹನ ನಿರ್ವಹಿಸಲು ಯೋಜನೆಯೊಂದನ್ನು ರೂಪಿಸಲು ದಿಲ್ಲಿಯ ನೆರೆಯ ರಾಜ್ಯಗಳೊಂದಿಗೆ ಕೇಂದ್ರ ತುರ್ತು ಸಭೆ ನಡೆಸಬೇಕು ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ ರಾಯ್ ಅವರು ಶನಿವಾರ ಹೇಳಿದ್ದಾರೆ.
ಬೆಳೆ ತ್ಯಾಜ್ಯ ದಹನ ಕಡಿಮೆ ಮಾಡದೇ ಇದ್ದರೆ ದಿಲ್ಲಿಯ ಜನರು ಮತ್ತೊಮ್ಮೆ ಉಸಿರಾಟದ ತೊಂದರೆಗೆ ಸಿಲುಕಲಿದ್ದಾರೆ ಎಂದು ರಾಯ್ ಹೇಳಿದ್ದಾರೆ. ದಿಲ್ಲಿಯ ಪರಿಸರ ಮಾಲಿನ್ಯಕ್ಕೆ ಪಟಾಕಿ ಸಿಡಿಸಿರುವುದು ಕೂಡ ಕೊಡುಗೆ ನೀಡಿದೆ. ಬೆಳೆ ತ್ಯಾಜ್ಯ ದಹನ ದಿಲ್ಲಿಯ ವಾಯು ಗುಣಮಟ್ಟ ಹದಗೆಡುವುದು ಮುಂದುವರಿಯಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರದ ಧೂಳು ಮಾಲಿನ್ಯ ನಿಯಂತ್ರಿಸಲು ರಸ್ತೆಗೆ ನೀರು ಸಿಂಪಡಿಸಲು 114 ಟ್ಯಾಂಕರ್ ಗಳನ್ನು ನಿಯೋಜಿಸಿದೆ.







