ಇಂಧನ ಸೆಸ್: ಕೇಂದ್ರದ ವಿರುದ್ಧ ಹರಿಹಾಯ್ದ ತೆಲಂಗಾಣ ಸಿಎಂ
"ತೆರಿಗೆ ಇಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲು ಕೇಂದ್ರಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ"

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (Photo source: PTI)
ಹೈದರಾಬಾದ್, ನ.8: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಇಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರದ್ದುಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕೆಸಿಆರ್ ಸರ್ಕಾರ ಭತ್ತ ಬೆಳೆಯದಂತೆ ರೈತರನ್ನು ನಿರುತ್ತೇಜನಗೊಳಿಸುತ್ತಿದೆ ಎಂದು ಆಪಾದಿಸಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಂತೆ ರೈತರಿಗೆ ಕರೆ ನೀಡಿರುವ ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, "ವಾಸ್ತವವಾಗಿ ಕೇಂದ್ರ ಸರ್ಕಾರ ರಾಜ್ಯದಿಂದ ಭತ್ತ ಖರೀದಿಸಲು ಸಿದ್ಧವಿಲ್ಲ" ಎಂದು ಹೇಳಿದರು. ಟಿಆರ್ಎಸ್ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ಏರಿಸಿಲ್ಲ. ಆದ್ದರಿಂದ ಇದೀಗ ತೆರಿಗೆ ಇಳಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ವಾಪಸ್ ಪಡೆಯಬೇಕು. ನೀವು ಹಾಗೆ ಮಾಡುವವರೆಗೂ ನೀವು ನೆಮ್ಮದಿಯಿಂದ ಇರಲು ನಾವು ಬಿಡುವುದಿಲ್ಲ. ತೆಲಂಗಾಣದಲ್ಲಿ ಬೆಳೆಯುವ ಸಂಪೂರ್ಣ ಭತ್ತವನ್ನು ಕೇಂದ್ರ ಸರ್ಕಾರವೇ ಖರೀದಿಸಬೇಕು. ರಾಜ್ಯ ಬಿಜೆಪಿ ನಾಯಕರು ಪೊಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಇದಕ್ಕೆ ಕೇಂದ್ರ ಸರ್ಕಾರ ಒಪ್ಪುವಂತೆ ಮಾಡಬೇಕು ಹಾಗೂ ಈ ಸಂಬಂಧ ಆದೇಶ ಮಾಡುವಂತೆ ಪ್ರಯತ್ನಿಸಬೇಕು" ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇನ್ನೂ ಕೆಳಹಂತದಲ್ಲೇ ಇದ್ದರೂ, ಕೇಂದ್ರ ಸರ್ಕಾರ ಸೆಸ್ ಹೆಸರಿನಲ್ಲಿ ಇಂಧನ ಬೆಲೆಯನ್ನು ಹೆಚ್ಚಿಸಿದ್ದು, ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. 2014ರಿಂದೀಚೆಗೆ ಒಮ್ಮೆ ಕೂಡಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 105 ಡಾಲರ್ ಮೀರಿಲ್ಲ ಎಂದು ಅಂಕಿಅಂಶ ನೀಡಿದರು.