ಗುರುಗ್ರಾಮದ ಮುಕ್ತ ಪ್ರದೇಶದಲ್ಲಿ ನಮಾಝ್ ವಿವಾದ: ಹರ್ಯಾಣ ಗೃಹಸಚಿವರು ಹೇಳಿದ್ದೇನು?

ಹರ್ಯಾಣ ಗೃಹಸಚಿವ ಅನಿಲ್ ವಿಜ್ (Photo credit: Twitter@anilvijminister)
ಚಂಡೀಗಢ, ನ.8: ಗುರುಗ್ರಾಮದ ಮುಕ್ತ ಪ್ರದೇಶದಲ್ಲಿ ನಮಾಝ್ ಸಲ್ಲಿಸಲಾಗುತ್ತಿದೆ ಎನ್ನಲಾದ ಸಂಬಂಧ ಎದ್ದಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಯಾಣ ಗೃಹಸಚಿವ ಅನಿಲ್ ವಿಜ್, "ಧಾರ್ಮಿಕ ಚಟುವಟಿಕೆಗಳನ್ನು ಧಾರ್ಮಿಕ ಸ್ಥಳಗಳ ಆವರಣದ ಒಳಗೆಯೇ ನಡೆಸಬೇಕು. ಯಾವುದೇ ಧರ್ಮದ ಜನ ಸ್ಥಳೀಯಾಡಳಿತದಿಂದ ಸೂಕ್ತ ಅನುಮತಿ ಪಡೆಯದೇ ಧಾರ್ಮಿಕ ಚಟುವಟಿಕೆಗಳನ್ನು ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದು" ಎಂದು ಹೇಳಿದ್ದಾರೆ.
"ಪ್ರತಿಯೊಬ್ಬರೂ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಆಯಾ ಧಾರ್ಮಿಕ ಸ್ಥಳಗಳಲ್ಲಿ ಹಮ್ಮಿಕೊಳ್ಳಬೇಕು. ಸೂಕ್ತ ಅನುಮತಿ ಪಡೆಯದೇ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದು. ಇದು ಎಲ್ಲರಿಗೂ ಅನ್ವಯವಾಗಬೇಕು" ಎಂದು ಸ್ಪಷ್ಟಪಡಿಸಿದರು.
ಗುರುಗ್ರಾಮದ ಮುಕ್ತ ಪ್ರದೇಶಗಳಲ್ಲಿ ನಮಾಝ್ ನಿರ್ವಹಿಸದಂತೆ ಬಲಪಂಥೀಯ ಗುಂಪುಗಳು ಆಗ್ರಹಿಸಿವೆ. ಮುಸ್ಲಿಮರು ಕೇವಲ ಮಸೀದಿ ಮತ್ತು ಈದ್ಗಾಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸಬೇಕು ಎಂದು ಒತ್ತಾಯಿಸುತ್ತಿವೆ. ಜಿಲ್ಲೆಯಲ್ಲಿ ಕೇವಲ 19 ಮಸೀದಿ ಮತ್ತು ಈದ್ಗಾಗಳಿವೆ. ಇವು ಬಹುತೇಕ ಒತ್ತುವರಿಯಾಗಿವೆ.
ಸಾರ್ವಜನಿಕ ಪ್ರದೇಶಗಳಲ್ಲಿ ನಮಾಝ್ ವ್ಯವಸ್ಥೆ ಮಾಡುವುದನ್ನು ವಿರೋಧಿಸಿ 2018ರಿಂದೀಚೆಗೆ ಬಲಪಂಥೀಯ ಸಂಘಟನೆಗಳು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ಪ್ರತಿಭಟನೆಗಳ ಬಳಿಕ ಜಿಲ್ಲಾಡಳಿತ 37 ನಿವೇಶನಗಳನ್ನು ನಮಾಝ್ಗಾಗಿ ನಿಗದಿಪಡಿಸಿತ್ತು. ಆದರೆ ಇದನ್ನು ಕೂಡಾ ಬಲಪಂಥೀಯ ಗುಂಪುಗಳು ಪ್ರಶ್ನಿಸಿವೆ.
ಕಳೆದ ತಿಂಗಳು ಭಾರತ ವಾಹಿನಿ ಎಂಬ ಸಂಘಟನೆ ಸೆಕ್ಟರ್ 47ರಲ್ಲಿ ನಮಾಝ್ ನಡೆಯುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಈ ಭಾಗದ ನಾಗರಿಕರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನವೆಂಬರ್ 5ರಂದು ಬಲಪಂಥೀಯ ಸಂಘಟನೆಗಳು ಸೆಕ್ಟರ್ 12ಎ ಪ್ರದೇಶದ ನಮಾಝ್ ನಡೆಯುವ ಸ್ಥಳದಲ್ಲಿ ಗೋವರ್ಧನ ಪೂಜೆ ಆಯೋಜಿಸಿದ್ದವು.







