ಕಲಬುರಗಿ: ಪೊಲೀಸ್ ಕಾನ್ ಸ್ಟೇಬಲ್ ಪುತ್ರನ ಹತ್ಯೆ ಪ್ರಕರಣ: ಐವರು ವಿದ್ಯಾರ್ಥಿಗಳ ಸಹಿತ 6 ಮಂದಿ ಬಂಧನ

ಕಲಬುರಗಿ, ನ.8: ನವೆಂಬರ್ 4ರಂದು ಬೆಳಗ್ಗೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆದ ಪೊಲೀಸ್ ಕಾನ್ ಸ್ಟೇಬಲ್ ಪುತ್ರ ಅಭಿಷೇಕ್ ಚಂದ್ರಕಾಂತ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರು ಕಾಲೇಜು ವಿದ್ಯಾರ್ಥಿಗಳ ಸಹಿತ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರ ಮಹಾಂತೇಶ್ ಭೈರಾಮಡಗಿ(22), ಗುದ್ದುತಾಯಿ ನಗರದ ಶುಭಂ ಅಶೋಕ್ ದೊಡ್ಡಮನಿ(23), ಅಮರ ಪ್ಯಾಲೇಸ್ ಹತ್ತಿರದ ನಿವಾಸಿ ಅಭಿಷೇಕ್(21), ಶಾಂತಿ ನಗರ ನಿವಾಸಿ ಕೌಶಿಕ್(20), ಪೊಲೀಸ್ ಕಾಲನಿಯ ಮುರ್ತಝ ಅಲಿ ಮುಹಮ್ಮದ್ ಅಲಿ(25) ಎಂಬ ಕಾಲೇಜು ವಿದ್ಯಾರ್ಥಿಗಳು ಹಾಗೂ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಐಬಿ ಕಾಲನಿ ನಿವಾಸಿ ಆಕಾಶ್ ಆದರ್ಶ ಮಾಯಾ(23) ಬಂಧಿತ ಆರೋಪಿಗಳಾಗಿದ್ದಾರೆ. ಹಳೆ ವೈಷಮ್ಯ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ನಾಲ್ಕು ಮಾರಕಾಸ್ತ್ರ, ಒಂದು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಲ್ಲಿನ ವಿದ್ಯಾನಗರ ನಿವಾಸಿ, ಪೊಲೀಸ್ ಕಾನ್ ಸ್ಟೇಬಲ್ ಚಂದ್ರಕಾಂತ್ ಎಂಬವರ ಪುತ್ರ ಅಭಿಷೇಕ್ ಚಂದ್ರಕಾಂತ್(27)ನನ್ನು ನ.4ರಂದು ಬೆಳಗ್ಗೆ ಬೈಕಿನಲ್ಲಿ ಜಿಮ್ ಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ, ಅಟ್ಟಾಡಿಸಿಕೊಂಡು ಹೋಗಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲೇ ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಬಗ್ಗೆ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








