ಉಡುಪಿ: ನ.13ಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ
ಉಡುಪಿ, ನ.8: ಮಣಿಪಾಲ ಮಾಹೆಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಪ್ರದಾನ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ನ.13ರ ಬೆಳಗ್ಗೆ 10ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ತರೀಕೆರೆ ಮೂಲದ ಈಗ ಅರಸಿಕೆರೆಯಲ್ಲಿ ಎಲ್ಲೈಸಿಯ ಆಡಳಿತಾಧಿಕಾರಿ ಯಾಗಿರುವ ಡಿ.ಎಸ್.ರಾಮಸ್ವಾಮಿ ಅವರ ‘ಮೀನು ಬೇಟೆಗೆ ನಿಂತ ದೋಣಿ ಸಾಲು’ ಕೃತಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಹಾಗೂ ವಿದ್ವಾಂಸರಾದ ಕಾಸರಗೋಡಿನ ಡಾ.ಪಿ.ಶ್ರೀಕೃಷ್ಣ ಭಟ್ (2020) ಹಾಗೂ ಡಾ.ಆರ್.ಶೇಷ ಶಾಸ್ತ್ರಿ (2021)ಇವರಿಗೆ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ರಾದ ಡಾ. ಜಿ.ಎಲ್. ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ಎಸ್. ನಾಯ್ಕಾ ಅಧ್ಯಕ್ಷತೆ ವಹಿಸಲಿದ್ದಾರೆ. ಸೇಡಿಯಾಪು ಪ್ರಶಸ್ತಿ ಪುರಸ್ಕೃತರನ್ನು ಪಿಪಿಸಿ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಂಜುನಾಥ ಕರಬ ಅಭಿನಂದಿಸಲಿರುವರು. ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಕಡೆಂಗೋಡ್ಲು ಕಾವ್ಯ ಪುರಸ್ಕೃತರ ಕೃತಿ ಪರಿಚಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಜಿ.ಎಲ್. ಹೆಗಡೆ ಅವರು ‘ಡಾ. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.







