ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ: ರಾಜ್ಯದ ವಿವಿಧೆಡೆ 11ನೇ ದಿನದ ವಿಧಿ ವಿಧಾನ

ಬೆಂಗಳೂರು, ನ.8: ನಟ ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ 11ನೆ ದಿನದ ಪುಣ್ಯಸ್ಮರಣೆ ಕಾರ್ಯವನ್ನು ನೆರವೇರಿಸಲಾಯಿತು.
ಸೋಮವಾರ ಡಾ.ರಾಜ್‍ಕುಮಾರ್ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಪೂಜಾ ವಿಧಿವಿಧಾನ ಪೂರೈಸುವ ಮೂಲಕ 11ನೆ ದಿನದ ಪುಣ್ಯಸ್ಮರಣೆ ಕಾರ್ಯವನ್ನು ನೆರವೇರಿಸಿದರು. ಮತ್ತೊಂದೆಡೆ ಪುನೀತ್ ಅಭಿಮಾನಿಗಳು ನಾನಾ ಭಾಗಗಳಲ್ಲಿ ಅನ್ನದಾನ ಮಾಡುವ ಮೂಲಕ ಸ್ಮರಿಸಿದರು.
ಪುನೀತ್ ಸಮಾಧಿಗೆ ಪತ್ನಿ ಅಶ್ವಿನಿ, ಪುತ್ರಿಯರಾದ ವಂದಿತಾ, ಧೃತಿ, ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಕುಟುಂಬ ಸದಸ್ಯರು, ಚಲನಚಿತ್ರದ ಗಣ್ಯರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ 11ನೇ ದಿನದ ಕಾರ್ಯದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿದರು.
ಪುನೀತ್‍ಗೆ ಪ್ರಿಯವಾದ 30 ಬಗೆಯ ಸಿಹಿ ತಿಂಡಿಗಳು ಹಾಗೂ ಮಾಂಸಾಹಾರದ ವಿವಿಧ ಖಾದ್ಯಗಳನ್ನು ಸಮಾಧಿ ಬಳಿ ಇಟ್ಟು ಪೂಜೆ ನೆರವೇರಿಸಿದರು.
ಚಿನ್ನೇಗೌಡ ಅವರ ಕುಟುಂಬ, ಗಾಜನೂರು ಸಂಬಂಧಿಕರು, ವಿನಯ್ ರಾಘವೇಂದ್ರ, ಯುವರಾಜ್‍ಕುಮಾರ್, ಶ್ರೀಮುರಳಿ, ಮಧುಬಂಗಾರಪ್ಪ ಸೇರಿದಂತೆ ಹಲವರು ಅಪ್ಪು ಪುಣ್ಯ ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
11ನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಅವರ ಆಪ್ತ ಬಳಗಕ್ಕೆ ಮಾತ್ರ ಕಂಠೀರವ ಸ್ಟುಡಿಯೋದಲ್ಲಿ ಅವಕಾಶ ನೀಡಲಾಗಿತ್ತು. ಪೂಜಾ ಸಮಯದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ನಿಬರ್ಂಧ ವಿಧಿಸಲಾಗಿತ್ತು.
ಬಿಬಿಎಂಪಿ, ಗೃಹಸಚಿವರಿಗೆ ಕೃತಜ್ಞತೆ
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ, ಬೆಂಬಲವಾಗಿ ನಿಂತಿದ್ದ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ನಮ್ಮ ನೋವನ್ನು ಅಡಗಿಸಿಟ್ಟುಕೊಂಡು, ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಗೃಹ ಮಂತ್ರಿ, ಬಿಬಿಎಂಪಿ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲದೆ ಅಂತ್ಯಸಂಸ್ಕಾರ ಪ್ರಕ್ರಿಯೆ ಸಂಪೂರ್ಣವಾಗುವವರೆಗೂ ಜೊತೆಗಿದ್ದು ಧೈರ್ಯ ನೀಡಿದ್ದೀರಿ. ನೀವು ಕೈಗೊಂಡ ಕ್ರಮಗಳಿಂದ ನಾವು ಅವರಿಗೊಂದು ಸೂಕ್ತವಾದ ವಿದಾಯ ಹೇಳಲು ಸಾಧ್ಯವಾಗಿದೆ.
ತಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲ ಅಭಿಮಾನಿಗಳ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಎಂದೂ ಅವರು ಹೇಳಿದ್ದಾರೆ.
ಆತ ಒಬ್ಬ ಅಮರಶ್ರೀ
ಪುನೀತ್‍ಗೆ ಪದ್ಮಶ್ರೀ ಅಲ್ಲ, ಆತ ಒಬ್ಬ ಅಮರಶ್ರೀ. ಪುನೀತ್ ಎಲ್ಲರ ಮನಸ್ಸಿನಲ್ಲೂ ಉಳಿದಿದ್ದಾರೆ. ಅಪ್ಪು ಹೋಗಿದ್ದಾರೆ ಎಂದು ಅಭಿಮಾನಿಗಳು ಏಕೆ ಭಾವಿಸಬೇಕು. ಅಪ್ಪು ನಮ್ಮಲ್ಲೇ ಇದ್ದಾರೆ ಅಂದುಕೊಳ್ಳಿ.
-ಶಿವರಾಜ್‍ಕುಮಾರ್, ನಟ
ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ
ನಟ ಪುನೀತ್ ರಾಜ್‍ಕುಮಾರ್ ಅಗಲಿಕೆ ಹಿನ್ನೆಲೆ ಅರಮನೆ ಮೈದಾನದಲ್ಲಿ ಅವರ ಸಂಬಂಧಿಕರು, ಗಣ್ಯರಿಗೆ ಇಂದು(ಮಂಗಳವಾರ) ಅನ್ನಸಂತರ್ಪಣೆ(ಮಾಂಸಾಹಾರ-ಸಸ್ಯಾಹಾರ) ನಡೆಯಲಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇದ್ದು, 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.






.jpg)
.jpg)
.jpg)
.jpg)

