ಜಮ್ಮು-ಕಾಶ್ಮೀರ: ಲಷ್ಕರ್ ಭಯೋತ್ಪಾದಕನ ಬಂಧನ

ಶ್ರೀನಗರ,ನ.8: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರೆ ತೊಯ್ಬ ಭಯೋತ್ಪಾದಕನೋರ್ವನ್ನು ಸೋಮವಾರ ಬಂಧಿಸಿರುವ ಭದ್ರತಾ ಪಡೆಗಳು,ಆತನ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಅನಂತನಾಗ್ ನ ಅಶ್ಮುಕಮ್ ಪ್ರದೇಶದ ವಹಾದನ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಸಂದರ್ಭ ಸಕ್ರಿಯ ಭಯೋತ್ಪಾದಕ ಹಫೀಝ್ ಅಬ್ದುಲ್ಲಾ ಮಲಿಕ್ ಎಂಬಾತನನ್ನು ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಬಂಧಿಸಿದೆ. ಈತ ಲಷ್ಕರ್ನ ಛಾಯಾ ಸಂಘಟನೆಯೆಂದು ಹೇಳಲಾಗಿರುವ ‘ದಿ ರಸಿಸ್ಟನ್ಸ್ ಫ್ರಂಟ್’ಗೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.
ಬಂಧನದ ಸಂದರ್ಭ ಮಲಿಕ್ ಬಳಿ ಒಂದು ಪಿಸ್ತೂಲು ಮತ್ತು ಏಳು ಸುತ್ತು ಗುಂಡುಗಳು ಪತ್ತೆಯಾಗಿದ್ದು,ಆತ ನೀಡಿದ ಮಾಹಿತಿಯ ಮೇರೆಗೆ ಬಳಿಕ ಕಟ್ಸು ಅರಣ್ಯದಿಂದ ಒಂದು ಎಕೆ ರೈಫಲ್,ಎರಡು ಮ್ಯಾಗಝಿನ್ ಗಳು ಮತ್ತು 40 ಸುತ್ತು ಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.
Next Story