ಪೇಜಾವರಶ್ರೀಗಳಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ

ಉಡುಪಿ, ನ.8: ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸೋಮವಾರ ಸಂಜೆ ಹೊಸದಿಲ್ಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥರಿಗೆ ಭಾರತ ಸರಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಹೊಸದಿಲ್ಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಭೇಟಿ ನಡೆಯಿತು. ಪೇಜಾವರ ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿ, ಶ್ರೀವಿಶ್ವೇಶತೀರ್ಥ ರನ್ನು ವಿಶೇಷವಾಗಿ ಸ್ಮರಿಸಿದರು. ರಾಮಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಇಬ್ಬರು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ಯಕ್ಷಗಾನದ ಕೇದಗೆ ಮುಂದಲೆ ಕಿರೀಟ ತೊಡಿಸಿ, ಜರತಾರಿ ಶಾಲು, ಬೆಳ್ಳಿಯ ತಟ್ಟೆಯಲ್ಲಿ ಉಡುಪಿ ಶ್ರೀಕೃಷ್ಣನ ಗಂಧ, ನಿರ್ಮಾಲ್ಯ ತುಳಸಿ ನೀಡಿ ಆಶೀರ್ವದಿಸಿದರು. ಅಲ್ಲದೇ ಉಡುಪಿಯ ಚಿತ್ರಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿ ಅವರು ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದವಾದ ತೈಲಚಿತ್ರ ಹಾಗೂ ಸಂಸ್ಕೃತ, ಕನ್ನಡ, ತುಳು ಲಿಪಿಗಳಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಗಳಿಗೆ ನೀಡಿದರು.
ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿಗಳು ಅತೀವ ಸಂತಸ ವ್ತಕ್ತಪಡಿಸಿದರು. ಶೀಘ್ರ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು. ಖಂಡಿತ ಬಂದೇ ಬರ್ತೇನೆ, ಚಿಂತೆ ಬೇಡ ಎಂದು ಮೋದಿ ನುಡಿದರು.
ಇದೇ ವೇಳೆ ಹಲವು ಮನವಿಗಳನ್ನೊಂಡ ಪತ್ರವನ್ನು ಶ್ರೀಗಳು ಪ್ರಧಾನಿಗೆ ನೀಡಿದರು. ಇದರಲ್ಲಿ ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿ ಗೊಳಿಸುವುದು, ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರಕಾರಿ ವ್ಯವಸ್ಥೆ ಯಿಂದ ಸ್ವಾಯತ್ತಗೊಳಿಸು ವುದು, ಮಹರ್ಷಿ ವೇದವ್ಯಾಸರ ಜಯಂತಿಯನ್ನು ತತ್ತ್ವಜ್ಞಾನ ದಿನ ಅಥವಾ ಅಧ್ಯಾತ್ಮ ದಿನವಾಗಿ ಘೋಷಿಸುವುದು ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಅಪೇಕ್ಷೆಗಳನ್ನು ಲಿಖಿತವಾಗಿ ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ಪೇಜಾವರ ಮಠದ ದಿವಾನರಾದ ಎಂ.ರಘುರಾಮಾಚಾರ್ಯ,ಡಿ.ಪಿ.ಅನಂತ್ ಹಾಗೂ ಸಾಮಾಜಿಕ ಕಾರ್ಯ ಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.








