50 ಕೋಟಿ ರೂ.ಗೆ ಮೀರಿದ ಕಾಮಗಾರಿ ಟೆಂಡರ್ ;ಪರಿಶೀಲನೆಗೆ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚನೆ: ಸಂಪುಟ ತೀರ್ಮಾನ
ಬೆಂಗಳೂರು, ನ. 8: ‘ಸರಕಾರದ ಕಾಮಗಾರಿಗಳ ಟೆಂಡರ್ ಅವ್ಯವಹಾರ ತಪ್ಪಿಸುವ ನಿಟ್ಟಿನಲ್ಲಿ 50 ಕೋಟಿ ರೂ.ಗಳಿಗೆ ಮೀರಿದ ಮೊತ್ತದ ಕಾಮಗಾರಿಗಳು ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್ ಮತ್ತು ಅಂದಾಜುಗಳ ಟೆಂಡರ್ ಪೂರ್ವ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಿದ್ದು, ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯಲ್ಲಿ ಇಬ್ಬರು ತಾಂತ್ರಿಕ ಪರಿಣಿತರು ಇರಲಿದ್ದಾರೆ. ಕಾರ್ಯ ಒತ್ತಡ ಹೆಚ್ಚಾದರೆ ಮತ್ತೊಂದು ಸಮಿತಿ ರಚನೆ ಮಾಡಲು ಅವಕಾಶ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಆಭಿವೃದ್ಧಿ ನಿಯಮಿತ(ಕೆಆರ್‍ಐಡಿಎಲ್) ಸೇರಿದಂತೆ ರಾಜ್ಯ ಸರಕಾರದ ಎಲ್ಲ ಕಾಮಗಾರಿಗಳ ಟೆಂಡರ್ ಆಹ್ವಾನಿಸುವ ಮೊದಲು ಕ್ರಿಯಾ ಯೋಜನೆ, ಯೋಜನೆಯ ಅಂದಾಜು ಮೊತ್ತ ಸೇರಿದಂತೆ ಎಲ್ಲವನ್ನು ಮೇಲ್ಕಂಡ ಸಮಿತಿ ಪರಿಶೀಲಿಸಲಿದೆ. ಆ ಬಳಿಕ ಟೆಂಡರ್ ಆಹ್ವಾನಿಸಲಾಗುವುದು ಎಂದು ಮಾಧುಸ್ವಾಮಿ ವಿವರಿಸಿದರು.
ರಾಜ್ಯ ಸರಕಾರದ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಒಂದು ಇಲಾಖೆ ಕಾಮಗಾರಿಯನ್ನು ಒಬ್ಬ ಗುತ್ತಿಗೆದಾರನೇ ಪಡೆಯುವುದನ್ನು ತಪ್ಪಿಸಲು ಹಾಗೂ ಯೋಜನಾ ಮೊತ್ತವನ್ನು ಮನಸೋ ಇಚ್ಛೆ ಬದಲಾವಣೆ ಮಾಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚನೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.







