ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ

ಕಾಪು, ನ.8: ಬಂಟಕಲ್ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 8ನೇ ವರ್ಷದ ಪದವಿ ಪ್ರದಾನ ಸಮಾರಂಭವು ನ.7ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ಗೌರವ ಅತಿಥಿಯಾಗಿ ಮಾಹೆ ಮಣಿಪಾಲದ ಕುಲಸಚಿವ ಡಾ.ನಾರಾಯಣ ಸಬಾಹಿತ್ ಮಾತನಾಡಿ, ಪದವೀಧರರು ತಮ್ಮ ವೃತ್ತಿ ಜೀವನದಲ್ಲಿ ಬರಬಹುದಾದ ಕಠಿಣ ಸವಾಲುಗಳನ್ನು ಎದುರಿಸುವಷ್ಟು ಸಧೃಢರಾಗಬೇಕು. ಈಗಿನ ಸ್ಪರ್ಧಾತ್ಮಕ ಜಗತಿತಿನಲ್ಲಿ ಯಶಸ್ವಿಯಾಗಲು ನಿರಂತರವಾಗಿ ಅಧ್ಯಯನಶೀಲರಾಗಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ಕೆನರಾ ಬ್ಯಾಂಕಿನ ಮಹಾಪ್ರಬಂಧಕ ರಾಮ ನಾಯಕ್ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಣಕಯಂತ್ರ ವಿಭಾಗದ ಪ್ರಜ್ಞಾ ಯು., ಸಿವಿಲ್ ವಿಭಾಗದ ರಿಯಾ ಸರಮನಿ ಸ್ಯಾಲಿನ್ಸ್, ವಿದ್ಯುನ್ಮಾನ ಮತ್ತು ಸಂವಹನ ವಿಬಾಗದ ನಮನ ಹಾಗೂ ಯಂತ್ರಶಿಲ್ಪ ವಿಭಾಗದ ನಾಗರಾಜ್ ಇವರಿಗೆ ಮಂಗಳೂರಿನ ಪ್ರತಿಷ್ಠಿತ ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್‌ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್‌ರವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ನಿಶಾಂತ್ ಕೆ. ಮತ್ತು ವೈಭವ ಲಕ್ಷ್ಮಿ ಇವರಿಗೆ ಉತ್ತಮ ಶೈಕ್ಷಣಿಕ ಸಾಧನೆಗಾಗಿ ಶ್ರೀಮಧ್ವ ವಾದಿರಾಜ ಪ್ರಶಸ್ತಿಗಳನ್ನು ನೀಡಲಾಯಿತು.
ಕಾಲೇಜಿನ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಎಚ್.ಜೆ. ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದ ವಿಜಯ ಕುಮಾರಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ಅಂತಿಮ ವರ್ಷದ ಗಣಕಯಂತ್ರ ವಿಬಾಗದ ಗಣೇಶ್ ಹತ್ವಾರ್ ತಂಡ ತಯಾರಿಸಿದ ತಿಥಿ ನಿರ್ಣಯ ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಲಾಯಿತು.
ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪಪ್ರಾಂಶು ಪಾಲ ಪ್ರೊ.ಡಾ.ಗಣೇಶ್ ಐತಾಳ್ ಪ್ರಮಾಣ ವಚನವನ್ನು ಬೋಧಿಸಿದರು. ಸೋದೆ ಮಠದ ದಿವಾನ ಶ್ರೀನಿವಾಸ ತಂತ್ರಿ, ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. ಡಾ.ರವೀಂದ್ರ ಎಚ್.ಜೆ ವಂದಿಸಿದರು. ಅನಂತ ಮೋಹನ ಮೌಲ್ಯ ಮತ್ತು ಹರ್ಷಿತ ನಿರೂಪಿಸಿದರು.







