ಪಿಎಂ ಕೇರ್ಸ್ ಫಂಡ್ ಭ್ರಷ್ಟಾಚಾರದ ಅತ್ಯಾಧುನಿಕ ಮಾರ್ಗ:ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪ

ಶ್ರೀನಗರ: ಪಿಎಂ-ಕೇರ್ಸ್ ಫಂಡ್ ಭ್ರಷ್ಟಾಚಾರದ ಅತ್ಯಾಧುನಿಕ ಮಾರ್ಗವಾಗಿದೆ ಎಂದು ಸೋಮವಾರ ಆರೋಪಿಸಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ನಿಧಿ ಸ್ವೀಕರಿಸಿದ ಹಣದ ಖಾತೆಯನ್ನು ಸಾರ್ವಜನಿಕಗೊಳಿಸಲು ಪ್ರಧಾನಿ ಸಿದ್ಧರಿಲ್ಲ ಎಂದಿದ್ದಾರೆ.
2016 ರಲ್ಲಿ ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ಯೀಕರಣದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಮುಫ್ತಿ, ಭ್ರಷ್ಟಾಚಾರವನ್ನು ಕೊನೆಗೊಳಿಸುವುದು, ಕಪ್ಪುಹಣವನ್ನು ವಾಪಸ್ ತರುವುದು ಹಾಗೂ ಹಿಂಸಾಚಾರವನ್ನು ಕೊನೆಗೊಳಿಸುವುದು ನೋಟು ರದ್ದತಿಯ ಹಿಂದಿನ ಉದ್ದೇಶವಾಗಿತ್ತು."ಆದಾಗ್ಯೂ, ಭ್ರಷ್ಟಾಚಾರ ಇಂದು ಉತ್ತುಂಗದಲ್ಲಿದೆ. ಈಗ ಅದನ್ನು ಪಿಎಂ ಕೇರ್ಸ್ ಫಂಡ್‌ನಂತೆ ಅತ್ಯಾಧುನಿಕ ರೀತಿಯಲ್ಲಿ ಮಾಡಲಾಗುತ್ತದೆ. ನೀವು ಪ್ರಧಾನಿಯಾಗಿ ಹೊಂದಿರುವ ಹಣದ ಖಾತೆಯನ್ನು ಬಹಿರಂಗಪಡಿಸಲು ಬಯಸದಿದ್ದರೆ ಅದು ಭ್ರಷ್ಟಾಚಾರವಲ್ಲದೆ ಮತ್ತೇನು? ಎಂದರು.
ಪಿಎಂ ಕೇರ್ಸ್ ನಿಧಿಯಡಿ ಒದಗಿಸಲಾದ ವೆಂಟಿಲೇಟರ್‌ಗಳು ಕಾಶ್ಮೀರದಲ್ಲಿ ಮಾತ್ರವಲ್ಲದೆ ಗುಜರಾತ್‌ನಲ್ಲಿಯೂ ದೋಷಪೂರಿತವಾಗಿವೆ. ಪಿಎಂ ಕೇರ್ಸ್ ನಿಧಿಯಲ್ಲಿ ದೊಡ್ಡ ವಂಚನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.





