ನವೆಂಬರ್ ತಿಂಗಳನ್ನು ‘ಮಕ್ಕಳ ಹಕ್ಕುಗಳ ಮಾಸ’ವನ್ನಾಗಿ ಆಚರಣೆ: ಉಮಾ ಮಹದೇವನ್

ಬೆಂಗಳೂರು, ನ.8: ರಾಜ್ಯ ಮಕ್ಕಳ ರಕ್ಷಣಾ ಆಯೋಗವು ರಾಜ್ಯದಲ್ಲಿ ಕೋವಿಡ್‍ನಿಂದ ಮಕ್ಕಳ ಮೇಲೆ ಉಂಟಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳಲು ಮತ್ತು ವಿಶ್ಲೇಷಣೆ ನಡೆಸುವ ಉದ್ದೇಶದಿಂದ ನವೆಂಬರ್ ತಿಂಗಳನ್ನು ‘ಮಕ್ಕಳ ಹಕ್ಕುಗಳ ಮಾಸ’ವನ್ನಾಗಿ ಆಚರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ದಕ್ಷಿಣ ಭಾರತ ರಾಜ್ಯ ಮಕ್ಕಳ ರಕ್ಷಣಾ ಆಯೋಗಗಳ ಸಮ್ಮೇಳನ-ಕೋವಿಡ್-19 ಸಾಂಕ್ರಾಮಿಕ ಹಾಗೂ ಮಕ್ಕಳ ಮೇಲೆ ಉಂಟಾದ ಪರಿಣಾಮ’ ಮತ್ತು ಮಕ್ಕಳ ಹಕ್ಕುಗಳ ಮಾಸಾಚರಣೆಯ ‘ಸಾರ್ವಜನಿಕ ಅಹವಾಲು ವಿಚಾರಣಾ’ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕ ಅಹವಾಲು ವಿಚಾರಣೆಯ ಸಭೆಯ ಮೂಲಕ ಮಕ್ಕಳ ಸಮಸ್ಯೆ, ಮಕ್ಕಳ ಬೇಡಿಕೆಗಳು, ಬಾಲ್ಯವಿವಾಹ, ಶೈಕ್ಷಣಿಕ ಸಮಸ್ಯೆ, ಬಾಲಕಾರ್ಮಿಕ, ಲೈಂಗಿಕ ಸಮಸ್ಯೆಗಳು, ಮಕ್ಕಳ ಮಾರಾಟ ಮತ್ತು ಸಾಗಾಣೆ, ಕಾನೂನು ಬಾಹಿರ ದತ್ತು, ಪೌಷ್ಠಿಕ ಆಹಾರದ ಕೊರತೆ, ಮಕ್ಕಳ ಮನೋವೈಜ್ಞಾನಿಕ ಸಮಸ್ಯೆಗಳು, ಬುಡಕಟ್ಟು ಮಕ್ಕಳ ಹಾಗೂ ಪೋಷಕತ್ವ ವಂಚಿತ ಮಕ್ಕಳ ಸಮಸ್ಯೆಗಳು, ಮಕ್ಕಳ ರಕ್ಷಣೆ, ಕೋವಿಡ್ ಸಂದರ್ಭದಲ್ಲಿ ಅನಾಥರಾದ ಮಕ್ಕಳು ಮುಂತಾದ ಅನೇಕ ಸಮಸ್ಯೆಗಳ ಬಗ್ಗೆ ಮಕ್ಕಳೆ ಭಾಗವಹಿಸಿ, ಸಮಸ್ಯೆಗಳನ್ನು ವ್ಯಕ್ತಪಡಿಸಲು ವೇದಿಕೆಯನ್ನು ಕಲ್ಪಿಸಿಕೊಡಲು ಆಯೋಗವು ತೀರ್ಮಾನಿಸಿದೆ ಎಂದು ಅವರು ಹೇಳಿದರು.
ವಿಕಲಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ವಿ. ಮುನಿರಾಜು ಮಾತನಾಡಿ, ರಾಜ್ಯದಲ್ಲಿ 3.30 ಲಕ್ಷ ಅಂಗವಿಕಲತೆ ಹೊಂದಿರುವ ಮಕ್ಕಳಿದ್ದು, ಕೋವಿಡ್ ಸಂದರ್ಭದಲ್ಲಿ ಇವರನ್ನು ಸಲಹಲು ಪೆÇೀಷಕರಿಗೆ ಸವಾಲಾಗಿದೆ. ಅಲ್ಲದೆ ಈ ಮಕ್ಕಳ ಆರೋಗ್ಯ ಪದೇ ಪದೇ ಹದಗೆಡುವುದು ಸಾಮಾನ್ಯವಾಗಿದ್ದು ಇದನ್ನು ಮನಗಂಡ ಸರಕಾರವು ಅವರಿಗೆ ಅನೇಕ ಸೌಲಭ್ಯವನ್ನು ಕಲ್ಪಿಸಿದೆ ಎಂದರು.
ಇದೇ ಸಂದರ್ಭದಲ್ಲಿ ‘ಮಕ್ಕಳಿಗೂ ಇವೆ ಹಕ್ಕುಗಳು’ ಕೈಪಿಡಿ, ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಾರ್ಷಿಕ ವರದಿ 2020-21’ ಹಾಗೂ ‘ಕರ್ನಾಟಕ ರಾಜ್ಯದಲ್ಲಿ ವರ್ಚುವಲ್ ತರಗತಿ’ಗಳಿಗೆ ಸಂಬಂಧಿಸಿದ ಮಾನಸಿಕ ಸಾಮಾಜಿಕ ಸಮಸ್ಯೆಗಳ ಅಧ್ಯಯನ ಕುರಿತ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಗೋವಾ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.







