ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ಏಕೆ ಮೇಕೆದಾಟು ಯೋಜನೆ ಜಾರಿಗೆ ತರಲಿಲ್ಲ: ಸಿಎಂ ಬೊಮ್ಮಾಯಿ ಪ್ರಶ್ನೆ

ಬೆಂಗಳೂರು, ನ.8: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಜಾರಿಗೊಳಿಸುವುದನ್ನು ಬಿಟ್ಟು ಏನು ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ಪಕ್ಷ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವಂತೆ ಪಾದಯಾತ್ರೆ ಹೆಸರಿನಲ್ಲಿ ಈಗ ನಮ್ಮ ಮೇಲೆ ಕಾಂಗ್ರೆಸ್ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ. ಇದು ಸರಿಯಲ್ಲ. ಮೇಕೆದಾಟು ಯೋಜನೆ ಡಿಪಿಆರ್ ತಯಾರು ಮಾಡಲು ಕಾಂಗ್ರೆಸ್ ಪಕ್ಷ ಹಲವು ವರ್ಷಗಳನ್ನೇ ತೆಗೆದುಕೊಂಡಿತು. ಆಗಲೇ ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಿ ಯೋಜನೆಯನ್ನೇಕೆ ಜಾರಿ ಮಾಡಲಿಲ್ಲ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
ಮೆಕೆದಾಟು ಯೋಜನೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಸರಕಾರ ಕಾನೂನು ಹೋರಾಟ ಮಾಡುತ್ತಿದೆ. ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕು. ಈ ಅನುಮತಿ ಪಡೆಯುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಅನುಮತಿ ಸಿಗುತ್ತದೆ ಎಂಬ ವಿಶ್ವಾಸ ವಿದೆ. ಅನುಮತಿ ಸಿಗುತ್ತಿದ್ದಂತೆಯೇ ಯೋಜನೆ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
‘ಮೆಕೆದಾಟು ರಾಜ್ಯದ ಮಹತ್ವಾಕಾಂಕ್ಷಿ ಯೋಜನೆ. ಇದನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಮ್ಮದು. ಅನುಮತಿ ಸಿಗುತ್ತಿದ್ದಂತೆಯೇ ಯೋಜನೆಯನ್ನು ಕಾರ್ಯಗತಗೊಳಿಸುವ ಕೆಲಸ ಮಾಡುತ್ತೇವೆ.’
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು







