ಕೊಹ್ಲಿ ಏಕದಿನ, ಟೆಸ್ಟ್ ನಾಯಕತ್ವ ತ್ಯಜಿಸಬೇಕೇ : ಸೆಹ್ವಾಗ್ ಏನು ಹೇಳುತ್ತಾರೆ ?
ಸೆಹ್ವಾಗ್ - ವಿರಾಟ್ ಕೊಹ್ಲಿ
ಮುಂಬೈ: ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಮವಾರ ನಮೀಬಿಯಾ ವಿರುದ್ಧ ವಿರಾಟ್ ಕೊಹ್ಲಿ ನಾಯಕನಾಗಿ ಕೊನೆಯ ಟಿ-20 ಪಂದ್ಯ ಆಡಿದರು. ಕೊಹ್ಲಿ ಭಾರತ ಕ್ರಿಕೆಟ್ ತಂಡದ ಏಕದಿನ ಹಾಗೂ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಬೇಕೇ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೀಗೆ ಪ್ರತಿಕ್ರಿಯಿಸಿದ್ದಾರೆ...
ಸೂಪರ್ 12 ಹಂತದಲ್ಲಿ ವಿಶ್ವಕಪ್ನಿಂದ ಹೊರ ಬೀಳುವ ಮೂಲಕ ವಿರಾಟ್ ಕೊಹ್ಲಿಯವರ ಟಿ-20 ನಾಯಕತ್ವದ ಅವಧಿ ಮುಗಿದಿದೆ. ಚುಟುಕು ಕ್ರಿಕೆಟ್ನ ನಾಯಕತ್ವವನ್ನು ತ್ಯಜಿಸುವುದಾಗಿ ಟೂರ್ನಿ ಆರಂಭಕ್ಕೆ ಮುನ್ನವೇ ಕೊಹ್ಲಿ ಪ್ರಕಟಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ ವಿರುದ್ಧ ಆರಂಭಿಕ ಎರಡು ಪಂದ್ಯಗಳಲ್ಲೇ ಶರಣಾಗುವ ಮೂಲಕ ಭಾರತದ ಸೆಮಿಫೈನಲ್ ಆಸೆ ಬಹುತೇಕ ಕಮರಿತ್ತು. ಜತೆಗೆ ಇದು ಟೆಸ್ಟ್ ಹಾಗೂ ಏಕದಿನ ಪಂದ್ಯಾವಳಿಯಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಮೂಡಲು ಕಾರಣವಾಗಿತ್ತು. ಆದರೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ಅವರ ಪ್ರಕಾರ, "33 ವರ್ಷದ ಕೊಹ್ಲಿ ಅದ್ಭುತ ನಾಯಕ. ಅವರು ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ತ್ಯಜಿಸಬಾರದು"
"ಇದು ಕೊಹ್ಲಿಯವರ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ನನ್ನ ಪ್ರಕಾರ ಟೆಸ್ಟ್ ಹಾಗೂ ಏಕದಿನ ನಾಯಕತ್ವವನ್ನು ತ್ಯಜಿಸಬಾರದು. ಅವರು ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲು ಬಯಸಿದರೆ ಅದು ಅವರ ನಿರ್ಧಾರ. ನನ್ನ ಪ್ರಕಾರ ಅವರ ನಾಯಕತ್ವದಲ್ಲಿ ಭಾರತ ಚೆನ್ನಾಗಿ ಆಡುತ್ತಿದೆ ಹಾಗೂ ನಾಯಕನಾಗಿ ಅವರ ಸಾಧನೆ ಅತ್ಯುತ್ತಮ" ಎಂದು ತಮ್ಮ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.
"ಕೊಹ್ಲಿ ಉತ್ತಮ ಆಟಗಾರ. ಆಕ್ರಮಣಕಾರಿ ನಾಯಕ ಮತ್ತು ಮುಂಚೂಣಿಯಿಂದ ತಂಡವನ್ನು ಮುನ್ನಡೆಸುವವರು, ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ನಾಯಕತ್ವ ತ್ಯಜಿಸುವುದು ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು ಎಂದು ಪುನರುಚ್ಚರಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.