ಕುಂದಾಪುರ; ಕಾಡೆಮ್ಮೆಯನ್ನು ಹತ್ಯೆಗೈದ ಪ್ರಕರಣ: ಮೂವರು ಆರೋಪಿಗಳ ಬಂಧನ
ಕುಂದಾಪುರ, ನ.9: ಶಂಕರನಾರಾಯಣ ವಲಯದ ಹೆಂಗವಳ್ಳಿ ಗ್ರಾಮ ದೊಡ್ಡಬೆಳಾರು ಪ್ರದೇಶದಲ್ಲಿ ಮೇ 31ರಂದು ಕಾಡೆಮ್ಮೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳ ತಂಡ ಸೋಮವಾರ ಬಂಧಿಸಿದೆ.
ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿಗಳಾದ ಸಫಾನ್ ಕರಾನಿ(30), ಕೆ. ನಾಹಿಫ್(23), ಹಿಲಿಯಾಣ ಗ್ರಾಮದ ಹೊಯ್ಗೆಬಳಾರಿನ ಆಝೀಮ್ (26) ಬಂಧಿತ ಆರೋಪಿಗಳು.
ಬಂಧಿತರಿಂದ ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ ಎಂ.ವಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪಜಿ., ಉಪ ವಲಯ ಅರಣ್ಯಾಧಿಕಾರಿಗಳಾದ ಕೀರ್ತನ್ ಶೆಟ್ಟಿ, ವೀರಣ್ಣ, ಅರಣ್ಯ ರಕ್ಷಕರಾದ ರವಿ, ರವೀಂದ್ರ ಅರಣ್ಯ ವೀಕ್ಷಕರಾದ ಶಿವಣ್ಣ ಆರ್.ವೇಷಗಾರ್, ವಾಹನ ಚಾಲಕ ವಿಜಯ ಭಾಗವಹಿಸಿದ್ದಾರೆ.