'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಾಗಾರದ ವೇದಿಕೆಗೆ ಪುನೀತ್ ಹೆಸರು: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ತಮ್ಮ ನಡೆ, ನುಡಿ, ಸರಳತೆ, ಸಮಾಜ ಸೇವೆ ಮೂಲಕ ಯುವ ಜನತೆಗೆ ಮಾದರಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಕಲಬುರಗಿಯಲ್ಲಿ ನ. 11 ರಂದು ನಡೆಯಲಿರುವ 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಾಗಾರದ ವೇದಿಕೆಗೆ ಹೆಸರಿಡಿಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ತೀರ್ಮಾನಿಸಿದ್ದಾರೆ.
ನ. 11 ರಂದು ಕಲಬುರಗಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಉದ್ಯಮಿಯಾಗಿ ಉದ್ಯೋಗ ನೀಡು ಮತ್ತು ಕೈಗಾರಿಕೆ ಅದಾಲತ್ ಕಾರ್ಯಾಗಾರವನ್ನು ಆಯೋಜಿಸಿದೆ. ಕಾರ್ಯಾಗಾರ ನಡೆಯುವ ವೇದಿಕೆಗೆ "ಪುನೀತ್ ರಾಜ್ ಕುಮಾರ್" ಎಂದು ಹೆಸರಿಟ್ಟು ಆಗಲಿದ ಮೇರು ನಟನೆಗೆ ಗೌರವ ಸಮರ್ಪಣೆ ಸಲ್ಲಿಸಲು ಸಚಿವ ನಿರಾಣಿ ಅವರು ಮುಂದಾಗಿದ್ದಾರೆ.
ಕಲಬುರಗಿ ಮಾತ್ರವಲ್ಲದೆ, ಮುಂದೆ ನಡೆಯಲಿರುವ ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ "ಉದ್ಯಮಿಯಾಗು ಉದ್ಯೋಗ ನೀಡು" ಕಾರ್ಯಕ್ರಮದ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಸರ್ವಸಮ್ಮತದ ತೀರ್ಮಾನವನ್ನು ಸಚಿವರು ತೆಗೆದುಕೊಂಡಿದ್ದಾರೆ.
ಕೇವಲ ಸಿನಿಮಾ ಕ್ಷೇತ್ರಕ್ಕೆ ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಅನೇಕ ಸಮಾಜ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಮುಂದಿನ ಯುವ ಜನಾಂಗಕ್ಕೆ ಅವರ ಹೆಸರು "ಆಜಾರಮರಗೊಳಿಸಲು" ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿರುವುದಾಗಿ ನಿರಾಣಿ ಅವರು ಹೇಳಿದ್ದಾರೆ.
ಕೇವಲ ಸಿನಿಮಾ ಕ್ಷೇತ್ರವಲ್ಲದೆ, ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವೃದ್ಧರ ಮತ್ತು ಅನಾಥರ ಪೋಷಣೆ ಜತೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಧಾರೆ ಎರೆದಿದ್ದರು. ಗೋ ಶಾಲೆಗಳನ್ನು ಪೋಷಣೆ ಮಾಡುತ್ತಿದ್ದರು. ತಾನು ಸಮಾಜಕ್ಕೆ ಈ ಕೊಡುಗೆ ಕೊಟ್ಟಿದ್ದೇನೆ ಎಂದು ಎಲ್ಲೂ ಬಹಿರಂಗಪಡಿಸದೇ ಸಮಾಜ ಸೇವೆ ಮಾಡುತ್ತಿದ್ದರು. ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಅಂತಹ ಮೇರುನಟ ನಮಗೆ ಎಂದೆಂದಿಗೂ ಮಾದರಿ ಎಂದು ನಿರಾಣಿ ಕೊಂಡಾಡಿದ್ದಾರೆ.
ಸೋಮವಾರ ನಡೆದ ಪುನೀತ್ ರಾಜ್ ಕುಮಾರ್ ಅವರ 11 ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ ನಿರಾಣಿ ಅವರು ಭಾಗವಹಿಸಿ ಆಗಲಿದ ಯುವನಟನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ತೆರಳಿದ್ದ ಅವರು ಅಪ್ಪುವಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಬಳಿಕ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ನಂತರ ಪುನೀತ್ ರಾಜ್ ಕುಮಾರ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಸಂಬಂಧಿಕರು ಆದ ಮಧು ಬಂಗಾರಪ್ಪ, ಸೇರಿದಂತೆ ಮತ್ತಿತರರ ಜೊತೆ ಪ್ರಸಾದ ಸೇವಿಸಿದರು.






.jpeg)


