ಆನೇಕಲ್; 32 ಬೈಕ್ ಕಳವು ಪ್ರಕರಣ: ಆರೋಪಿ ಸೆರೆ

ಶರತ್ ಬಾಬು
ಆನೇಕಲ್ : ಸುಮಾರು 32 ಬೈಕ್ ಗಳನ್ನು ಕಳವು ಮಾಡಿದ ಆರೋಪದಲ್ಲಿ ಯುವಕನೋರ್ವನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆನೇಕಲ್ ಉಪ ವಿಭಾಗದ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆ, ಗುಡಿಯಾತಂ ತಾಲೂಕು, ಕಾರಂಪಟ್ಟಿ ಗ್ರಾಮದ ಚಾಲಕ ವೃತ್ತಿ ಮಾಡಿಕೊಂಡಿದ್ದ ಶರತ್ ಬಾಬು(38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆನೇಕಲ್ ತಾಲೂಕಿನಲ್ಲಿ ಬೈಕ್ ಕಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ಎಸ್ಪಿ ಡಾ. ಕೆ ವಂಶಿಕೃಷ್ಣ, ಎಎಸ್ಪಿ ಕೆ ಲಕ್ಷ್ಮಿಗಣೇಶ್, ಡಿವೈಎಸ್ಪಿ ಎಂ ಮಲ್ಲೇಶ್, ಪಿಐ ಸುದರ್ಶನ್ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಜಿಗಣಿ ಎಸ್ಐ ಶಿವಲಿಂಗನಾಯ್ಕ, ರಾಜಣ್ಣ, ಎಲ್ ರಾಜು, ಮಹೇಶ್ ಕೆಕೆ, ರಾಜೇಶ್ ಎಂ, ಪಿಸಿಗಳಾದ ಕೋಟೇಶ್, ಶಿವಪ್ರಸಾದ್ ಮತ್ತು ಮೆಹಬೂಬ್ ಶೇಖ್ ತಂಡ ಆರೋಪಿಯ ಚಲನವಲನವನ್ನು ಪತ್ತೆ ಹಚ್ಚಿ ಆತನ ಬಳಿಯೇ ಸುಳಿಯುತ್ತಾ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಪರಿಣಾಮ ಜಿಗಣಿ, ಬನ್ನೇರುಘಟ್ಟ, ಆನೇಕಲ್ ಮತ್ತಿತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಬೈಕ್ ಕಳ್ಳತನ ಮಾಡಿ ತಮಿಳುನಾಡಿಗೆ ಬೈಕ್ ಸಮೇತ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.





