ದೇವೇಂದ್ರ ಫಡ್ನವಿಸ್ ಗೆ ಭೂಗತ ಲೋಕದೊಂದಿಗಿರುವ ಸಂಬಂಧವನ್ನು ನಾಳೆ ಬಹಿರಂಗಪಡಿಸುವೆ: ನವಾಬ್ ಮಲಿಕ್

ಮುಂಬೈ: ರಾಜ್ಯ ಸಚಿವ ನವಾಬ್ ಮಲಿಕ್ ಅವರ ಭೂಗತ ಲೋಕದ ಸಂಪರ್ಕದ ಬಗ್ಗೆ ದೀಪಾವಳಿಯ ನಂತರದ ಬಹಿರಂಗಪಡಿಸುವೆ ಎಂದಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂದು ಕೆಲವು ಪುರಾವೆಯನ್ನು ಮುಂದಿಟ್ಟಿದ್ದಾರೆ. ಫಡ್ನವಿಸ್ ಆರೋಪಕ್ಕೆ ತಿರುಗೇಟು ನೀಡಿರುವ ನವಾಬ್ ಮಲಿಕ್ ನಾನು ನಾಳೆ ಸತ್ಯದ ಬಾಂಬ್ ಎಸೆಯುತ್ತೇನೆ. ಫಡ್ನವಿಸ್ ಗೆ ಭೂಗತ ಲೋಕದೊಂದಿಗಿರುವ ಸಂಬಂಧವನ್ನು ಬಹಿರಂಗಪಡಿಸುವೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಫಡ್ನವಿಸ್ ಅವರು ಮಲಿಕ್‌ಗೆ ಭೂಗತ ಲೋಕದ ಸಂಪರ್ಕವಿದೆ ಎಂಬ ತನ್ನ ಹಿಂದಿನ ಆರೋಪವನ್ನು ಪುನರುಚ್ಚರಿಸಿದರು. ಸಂಪರ್ಕದ "ಪುರಾವೆ" ನನ್ನಲ್ಲಿದೆ ಎಂದು ಹೇಳಿದ್ದಾರೆ.
"ದೀಪಾವಳಿಯ ನಂತರ ನಾನು ಏನೋ ಒಂದು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದೆ. ಪೇಪರ್ಸ್ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡಿತು. 1993ರ ಮುಂಬೈ ಸ್ಫೋಟದ ಆರೋಪಿ ಭೂಗತ ಜಗತ್ತಿನ ವ್ಯಕ್ತಿಯೊಂದಿಗೆ ನವಾಬ್ ಮಲಿಕ್ ಆಸ್ತಿ ಒಪ್ಪಂದ ಮಾಡಿಕೊಂಡಿದ್ದರು’’ ಎಂದೂ ಫಡ್ನವಿಸ್ ಆರೋಪಿಸಿದರು.
"ಕುರ್ಲಾದಲ್ಲಿ ಎಲ್ ಬಿಎಸ್ ರಸ್ತೆಯಲ್ಲಿರುವ 2.80 ಎಕರೆ ಜಾಗವನ್ನು ಗೋವಾಲಾ ಕಾಂಪೌಂಡ್ ಎಂದು ಕರೆಯಲಾಗುತ್ತದೆ. ಈ ಜಾಗವು ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನೋಂದಣಿಯಾಗಿದೆ. ಈ ಕಂಪನಿಯು ನವಾಬ್ ಮಲಿಕ್ ಅವರ ಕುಟುಂಬಕ್ಕೆ ಸಂಬಂಧಿಸಿದೆ. ಅವರು ಕಂಪನಿಯಲ್ಲಿದ್ದರು. ಆದರೆ ಅವರು ಸಚಿವರಾದ ನಂತರ ರಾಜೀನಾಮೆ ನೀಡಿದರು. ಈ ಜಾಗವನ್ನು ಭೂಗತ ಜಗತ್ತಿನ ವ್ಯಕ್ತಿಗಳಿಂದ ರೂ. 30 ಲಕ್ಷಕ್ಕೆ ಖರೀದಿಸಲಾಗಿದ್ದು, ರೂ. 20 ಲಕ್ಷ ಮಾತ್ರ ಪಾವತಿಸಲಾಗಿದೆ ಎಂದು ಫಡ್ನವಿಸ್ ಆರೋಪಿಸಿದ್ದಾರೆ.
"ಈ ಡೀಲ್ ಯಾವಾಗ ನಡೆದಿತ್ತು ಎಂಬುದು ನನ್ನ ಪ್ರಶ್ನೆ. ಸಲೀಂ ಪಟೇಲ್ ಯಾರೆಂದು ನಿಮಗೆ ತಿಳಿದಿಲ್ಲವೇ? ನೀವು ಅಪರಾಧಿಗಳಿಂದ ಏಕೆ ಜಮೀನು ಖರೀದಿಸಿದ್ದೀರಿ? ಅವರು ಎಲ್‌ಬಿಎಸ್ ರಸ್ತೆಯಲ್ಲಿರುವ ಮೂರು ಎಕರೆ ಜಾಗವನ್ನು ರೂ. 30 ಲಕ್ಷಕ್ಕೆ ಏಕೆ ಮಾರಾಟ ಮಾಡಿದರು" ಎಂದು ಕೇಳಿದರು.
ಸಲೀಂ ಪಟೇಲ್ ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂನ ಸಹಾಯಕ ಹಾಗೂ ದಾವೂದ್ ಸಹೋದರಿಯ ಚಾಲಕನಾಗಿದ್ದನು. ದಾವೂದ್ ಪರಾರಿಯಾದ ನಂತರ ಸಲೀಂ ಪಟೇಲ್ ಮೂಲಕ ಹಸೀನಾ ಪಾರ್ಕರ್ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡರು. ದಾವೂದ್ ಇಬ್ರಾಹಿಂ 1993ರ ಮುಂಬೈ ಬಾಂಬ್ ಸ್ಫೋಟದ ಸೂತ್ರಧಾರನಾಗಿದ್ದಾನೆ.
"ದೇವೇಂದ್ರ ಫಡ್ನವಿಸ್‌ಗೆ ಸಂಬಂಧಿಸಿದಂತೆ ನಾನು ನಾಳೆ ಹೈಡ್ರೋಜನ್ ಬಾಂಬ್ ಅನ್ನು ಎಸೆಯುತ್ತೇನೆ. ನಾನು ದೇವೇಂದ್ರ ಫಡ್ನವಿಸ್‌ನ ಭೂಗತ ಜಗತ್ತಿನ ಸಂಪರ್ಕವನ್ನು ಬಹಿರಂಗಪಡಿಸುತ್ತೇನೆ" ಎಂದು ಮಲಿಕ್ ತನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ದೇವೇಂದ್ರ ಫಡ್ನವಿಸ್ ನನ್ನನ್ನು ಸ್ಫೋಟದ ಅಪರಾಧಿಗಳು ಹಾಗೂ ಭೂಗತ ಜಗತ್ತಿನೊಂದಿಗೆ ಸಂಪರ್ಕಿಸುವ ಮೂಲಕ ನನ್ನ ಘನತೆಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ನನ್ನ ಸ್ಥಳದಿಂದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ಈ ಹಿಂದೆ ಹೇಳುವ ಮೂಲಕ ಅದೇ ರೀತಿ ಮಾಡಿದರು ... ನಾನು ಅವರಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ" ಎಂದು ಮಲಿಕ್ ಹೇಳಿದರು.







