ಬೆಂಗಳೂರು: ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.9: ಸಾಲಬಾಧೆ ಹಿನ್ನೆಲೆ ಹೆಡ್ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದುಬಾಸಿಪಾಳ್ಯದ ನಿವಾಸಿ ಕುಮಾರ್(36) ಮೃತ ಹೆಡ್ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ.
ಪಶ್ವಿಮ ವಿಭಾಗದ ಸಶಸ್ತ್ರ ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್, ಎಂದಿನಂತೆ ಉಳ್ಳಾಲದಲ್ಲಿರುವ ಸಿಎಆರ್ ಕಚೇರಿಗೆ ಸೋಮವಾರ ಕರ್ತವ್ಯಕ್ಕೆಂದು ತೆರಳಿದ್ದರು. ಯಾರೂ ಇಲ್ಲದಿರುವಾಗ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡೆತ್ ನೋಟ್ನಲ್ಲಿಯೂ ಸಾವಿಗೆ ಸಾಲವೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.





