ಮಿಝೋರಾಂ ಸಿಎಂ ಬೇಡಿಕೆಯನ್ನು ತಿರಸ್ಕರಿಸಿ ರಾಜ್ಯದ ಭಾಷೆ ಅರಿಯದ ಅಧಿಕಾರಿಯನ್ನು ಮುಖ್ಯ ಕಾರ್ಯದರ್ಶಿಯನ್ನಾಗಿಸಿದ ಕೇಂದ್ರ
ಹೊಸದಿಲ್ಲಿ: ಮಿಜೋರಾಂ ಮುಖ್ಯಮಂತ್ರಿ ಪು ಝೊರಂತಂಗ ಅವರ ವಿರೋಧವನ್ನು ಲೆಕ್ಕಿಸದೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಕ್ಕೆ ರೇಣು ಶರ್ಮ ಅವರನ್ನು ಹೊಸ ಮುಖ್ಯ ಕಾರ್ಯದರ್ಶಿಯನ್ನು ನೇಮಿಸಿದೆ. ಇದೇ ಮೊದಲ ಬಾರಿಗೆ ಮಿಜೋ ಭಾಷೆಯಲ್ಲಿ ವ್ಯವಹಾರ ಜ್ಞಾನವಿಲ್ಲದವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.
ಅಕ್ಟೋಬರ್ 28 ರಂದು ಶರ್ಮ ಅವರನ್ನು ಮಿಜೋರಾಂನ ಹೊಸ ಮುಖ್ಯ ಕಾರ್ಯದಶಿಯಾಗಿ ಕೇಂದ್ರ ಗೃಹ ಸಚಿವಾಲಯ ಹೆಸರಿಸಿದ ಬೆನ್ನಲ್ಲೇ ಮಿಜೋರಾಂ ಸೀಎಂ ಅವರ ಕಚೇರಿ ಹಾಗೂ ಕೇಂದ್ರ ಸಚಿವಾಲಯದ ನಡುವೆ ಜಟಾಪಟಿ ಆರಂಭಗೊಂಡಿತ್ತು.
ಮಣಿಪುರ ಕೇಡರ್‍ನ ಐಎಎಸ್ ಅಧಿಕಾರಿ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೆ ಸಿ ರಾಮತಂಗ ಅವರಿಗೆ ಭಡ್ತಿ ನೀಡಿ ನಿವೃತ್ತರಾಗಲಿರುವ ಲಾಲುನ್ಮವಿಯ ಚುವಾಗೊ ಅವರ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಮಿಜೋರಾಂ ಮುಖ್ಯಮಂತ್ರಿ ಕೇಳಿಕೊಂಡರೂ ಪ್ರಯೋಜನವಾಗಿರಲಿಲ್ಲ. ಕೇಂದ್ರ ತನ್ನದೇ ಆಯ್ಕೆಯ ಅಧಿಕಾರಿಯನ್ನು ಈ ಹುದ್ದೆಗೆ ಹೆಸರಿಸಿದಾಗ ಮುಖ್ಯಮಂತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಕ್ಟೋಬರ್ 28ರಂದು ತಮ್ಮ ಆಕ್ಷೇಪ ಸೂಚಿಸಿ ಪತ್ರ ಬರೆದಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಿಜೋರಾಂ ನಾಗರಿಕರಿಗೆ ಹಿಂದಿ ತಿಳಿದಿಲ್ಲ ಹಾಗೂ ರಾಜ್ಯದ ಯಾವುದೇ ಸಚಿವರಿಗೂ ಹಿಂದಿ ತಿಳಿದಿಲ್ಲ. ಹೀಗಿರುವಾಗ ಮಿಜೋ ಭಾಷೆ ತಿಳಿಯದವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿಸಿದರೆ ಸಮಸ್ಯೆಯಾಗಬಹುದು ಎಂದು ಮುಖ್ಯಮಂತ್ರಿ ಪತ್ರ ಬರೆದಿದ್ದರೂ ಕೇಂದ್ರ ಅದನ್ನು ಪರಿಗಣಿಸಿಲ್ಲ.
ಮುಖ್ಯಮಂತ್ರಿ ಝೊರಂತಂಗ ಅವರ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಎನ್‍ಡಿಎ ಮೈತ್ರಿಕೂಟ ಪಕ್ಷಗಳಲ್ಲಿ ಒಂದಾಗಿದೆ.