ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ಸರಣಿಗೆ ರೋಹಿತ್ ಶರ್ಮಾ ನಾಯಕತ್ವ
ಮೊದಲ ಟೆಸ್ಟ್ ನಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಹೊಸದಿಲ್ಲಿ: ನ್ಯೂಝಿಲ್ಯಾಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಸರಣಿಗೆ ಉಪ ನಾಯಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಕಿವೀಸ್ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯವಿರುವುದಿಲ್ಲ. ಮೊದಲ ಟೆಸ್ಟ್ ನಲ್ಲಿ ರೋಹಿತ್ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿಯಿಂದ ತೆರವಾಗಿರುವ ಭಾರತದ ಟ್ವೆಂಟಿ-20 ತಂಡದ ನಾಯಕರನ್ನಾಗಿ ರೋಹಿತ್ ರನ್ನು ನೇಮಿಸಲಾಗಿದೆ.
ಹಾಲಿ ಟೆಸ್ಟ್ ಕ್ರಿಕೆಟ್ ನಾಯಕ ಕೊಹ್ಲಿ ಮೊದಲ ಪಂದ್ಯದಿಂದ ವಿರಾಮ ಪಡೆಯಲಿದ್ದು, ಮುಂಬೈನಲ್ಲಿ ನಡೆಯುವ 2ನೇ ಪಂದ್ಯಕ್ಕೆ ತಂಡಕ್ಕೆ ವಾಪಸ್ ಆಗಲಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳೆ ಫಾರ್ಮ್ ಕಳೆದುಕೊಂಡಿರುವ ಹಾಲಿ ಉಪ ನಾಯಕ ಅಜಿಂಕ್ಯ ರಹಾನೆ ಉಪ ನಾಯಕನಾಗಿ ಮುಂದುವರಿಯಲಿದ್ದಾರೆ. ಟ್ವೆಂಟಿ-20 ಸರಣಿಗೆ ಕೆ.ಎಲ್. ರಾಹುಲ್ ಉಪ ನಾಯಕನಾಗಿದ್ದಾರೆ.
ಜೈಪುರ, ರಾಂಚಿ ಹಾಗೂ ಕೋಲ್ಕತಾದಲ್ಲಿ ನ.17, 19 ಹಾಗೂ 21ರಂದು 3 ಟ್ವೆಂಟಿ-20 ಪಂದ್ಯಗಳು ನಡೆಯಲಿವೆ. ಕಾನ್ಪುರ ಹಾಗೂ ಮುಂಬೈ ಟೆಸ್ಟ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿವೆ. ನ.25ರಿಂದ ಮೊದಲ ಟೆಸ್ಟ್ ಹಾಗೂ ಡಿ.3ರಿಂದ 2ನೇ ಟೆಸ್ಟ್ ಆರಂಭವಾಗಲಿದೆ.