ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ: ಸಂಸದ ಅನಂತ ಕುಮಾರ್ ಹೆಗಡೆ
ಕಾರವಾರ : ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿನ ಅಭಿವೃದ್ಧಿಯ ಲಾಭವನ್ನು ದೇಶದ್ರೋಹಿಗಳು ಪಡೆದುಕೊಳ್ಳುತ್ತಾರೆ. ಮಂಗಳೂರು ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತಿದೆ. ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿಗೆ ತಲೆನೋವಾಗಿರುವುದು ಮಂಗಳೂರಿನ ಮೂಲ ನಿವಾಸಿಗಳಲ್ಲ, ಕೇರಳದವರು. ನಮ್ಮ ಊರಿನ ಅಭಿವೃದ್ಧಿ ಲಾಭವನ್ನು ನಾವೇ ಪಡೆದುಕೊಳ್ಳಬೇಕು. ಮಂಗಳೂರಿನ ಅಭಿವೃದ್ಧಿ ಲಾಭವನ್ನು ಕೇರಳದವರು ಪಡೆದುಕೊಳ್ಳುತಿದ್ದಾರೆ. ನಾವು ಬೇರೆಡೆ ಹೋಗಿ ಅಲ್ಪ ಸಂಬಳಕ್ಕೆ ಚಾಕರಿ ಮಾಡುತ್ತಿದ್ದೇವೆ ಎಂದರು.
ಇಷ್ಟು ದಿನ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದೆವು. ಆದರೆ ಆ ದಿಕ್ಕಿನೆಡೆಗೆ ದಾಪುಗಾಲು ಹಾಕಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯೆಡೆಗೆ ದಾಪುಗಾಲು ಹಾಕುತ್ತಿದೆ. ಜಿಲ್ಲೆಯಲ್ಲಿ ಮಂಗಳೂರಿಗಿಂತ ಅತೀ ದೊಡ್ಡ ಬಂದರನ್ನು ನಿರ್ಮಿಸುತ್ತಿದ್ದೇವೆ. ಏರ್ಪೋರ್ಟ್ ಕೂಡ ಬರಲಿದೆ. ಇಲ್ಲಿ ಅಭಿವೃದ್ಧಿ ಮಾಡಿಯೇ ನಾನು ವಿಶ್ರಮಿಸುತ್ತೇನೆ ಎಂದರು.