ರಫೇಲ್ ಲಂಚ ಹಗರಣ ನಡೆದಿದ್ದು ಕಾಂಗ್ರೆಸ್ ಆಡಳಿತದಲ್ಲಿ: ಬಿಜೆಪಿ ದಾಳಿ

ಹೊಸದಿಲ್ಲಿ,ನ.9: ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾಗಿಯಾಗಿದ್ದ ಮಧ್ಯವರ್ತಿಗೆ 2007 ಮತ್ತು 2012ರ ನಡುವೆ ಲಂಚ ಪಾವತಿಯಾಗಿತ್ತು ಮತ್ತು ಅಗತ್ಯ ದಾಖಲೆಗಳಿದ್ದರೂ ಲಂಚದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಿಬಿಐ ವಿಫಲಗೊಂಡಿತ್ತು ಎಂದು ಫ್ರೆಂಚ್ ಆನ್‌ಲೈನ್ ಜರ್ನಲ್ ಮೀಡಿಯಾಪಾರ್ಟ್ ವರದಿ ಮಾಡಿರುವ ಬೆನ್ನಿಗೇ ರಾಜಕೀಯ ಕೆಸರೆರಚಾಟ ಮತ್ತೆ ಆರಂಭಗೊಂಡಿದೆ.
ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಮುಚ್ಚಿಡಲು ಮೋದಿ ಸರಕಾರವು ಕಾರ್ಯಾಚರಣೆಯೊಂದನ್ನು ನಡೆಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್,ಮಧ್ಯವರ್ತಿಯಿಂದ ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದರೂ ಆತನ ಪಾತ್ರದ ಬಗ್ಗೆ ತನಿಖೆಯನ್ನೇಕೆ ನಡೆಸಿರಲಿಲ್ಲ ಎಂದು ಪ್ರಶ್ನಿಸಿದೆ.
ಬಿಜೆಪಿ ಸರಕಾರವು ರಾಷ್ಟ್ರೀಯ ಭದ್ರತೆಗೆ ಎಳ್ಳುನೀರು ಬಿಟ್ಟಿದೆ, ಭಾರತೀಯ ವಾಯುಪಡೆಯ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡಿದೆ ಮತ್ತು ಬೊಕ್ಕಸಕ್ಕೆ ಸಾವಿರಾರು ಕೋ.ರೂ.ಗಳ ನಷ್ಟವನ್ನುಂಟು ಮಾಡಿದೆ ಎಂದು ಆರೋಪಿಸಿದ ಕಾಂಗ್ರೆಸ್ ವಕ್ತಾರ ಪವನ ಖೇರಾ ಅವರು,2015ರಲ್ಲಿ ರಫೇಲ್ ಒಪ್ಪಂದದ ಅಂತಿಮ ಮಾತುಕತೆಗಳ ಸಂದರ್ಭದಲ್ಲಿ ಮಧ್ಯವರ್ತಿ ಸುಷೇನ್ ಗುಪ್ತಾ ರಕ್ಷಣಾ ಸಚಿವಾಲಯದ ಗೌಪ್ಯ ದಾಖಲೆಗಳನ್ನು ಪಡೆದುಕೊಂಡಿದ್ದ ಮತ್ತು ಈ ದಾಖಲೆಗಳಲ್ಲಿ ಭಾರತೀಯ ಸಂಧಾನಕಾರರ ನಿಲುವು ಮತ್ತು ವಿಶೇಷವಾಗಿ ಅವರು ವಿಮಾನದ ಬೆಲೆಯನ್ನು ಹೇಗೆ ಲೆಕ್ಕ ಹಾಕಿದ್ದರು ಎಂಬ ಕುರಿತು ವಿವರಗಳಿದ್ದವು. ಇವು ರಫೇಲ್ ವಿಮಾನಗಳ ತಯಾರಕ ಡಸಾಲ್ಟ್ಏವಿಯೇಷನ್‌ಗೆ ಸ್ಪಷ್ಟ ಅನುಕೂಲವನ್ನು ಕಲ್ಪಿಸಿದ್ದವು ಎನ್ನುವುದನ್ನು ಮೀಡಿಯಾಪಾರ್ಟ್ ವರದಿಯು ಬಯಲಿಗೆಳೆದಿದೆ ಎಂದರು.
ಈ ನಡುವೆ ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರಗಳಿಗಾಗಿ 2007-2012ರ ನಡುವೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು,ಐಎನ್‌ಸಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಅನ್ನು ‘ಐ ನೀಡ್ ಕಮಿಷನ್ ’ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾತ್ರಾ,2019ರ ಚುನಾವಣೆಗಳಿಗೆ ಮುನ್ನ ಪ್ರತಿಪಕ್ಷಗಳು,ವಿಶೇಷವಾಗಿ ಕಾಂಗ್ರೆಸ್ ಪಕ್ಷವು ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ವಾತಾವರಣವೊಂದನ್ನು ಸೃಷ್ಟಿಸಲು ಹೇಗೆ ಪ್ರಯತ್ನಿಸಿತ್ತು ಎನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. ಇದು ತಮಗೆ ರಾಜಕೀಯ ಲಾಭವನ್ನುಂಟು ಮಾಡುತ್ತದೆ ಎಂದು ಅವು ಭಾವಿಸಿದ್ದವು. ಇಂದು ನಾವು ನಿಮ್ಮೆದುರು ಕೆಲವು ಮಹತ್ವದ ದಾಖಲೆಗಳನ್ನು ಇಡುತ್ತಿದ್ದೇವೆ. ಫ್ರಾನ್ಸ್ ನ ಮೀಡಿಯಾಪಾರ್ಟ್ ರಫೇಲ್‌ನಲ್ಲಿ ಭ್ರಷ್ಟಾಚಾರ ನಡೆದಿತ್ತು ಎನ್ನುವುದನ್ನು ಬಹಿರಂಗಗೊಳಿಸಿದೆ ಮತ್ತು ಇಡೀ ಹಗರಣವು 2007 ಮತ್ತು 2012ರ ನಡುವೆ ನಡೆದಿತ್ತು ಎಂದರು.