ನ.29ರಂದು ರೈತ ಒಕ್ಕೂಟದಿಂದ ಸಂಸತ್ ಭವನದತ್ತ ಮೆರವಣಿಗೆ
‘ನಮ್ಮನ್ನು ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಧರಣಿ ಸತ್ಯಾಗ್ರಹ’

ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಒಕ್ಕೂಟಗಳು ನವೆಂಬರ್ 29 ರಂದು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ನಿರ್ಧರಿಸಿವೆ.
ದಿಲ್ಲಿ ಗಡಿಯಲ್ಲಿ ತಮ್ಮ ಪ್ರತಿಭಟನೆ ಒಂದು ವರ್ಷ ಪೂರೈಸಿದ ಕೆಲವೇ ದಿನಗಳಲ್ಲಿ ರೈತ ಸಂಘಟನೆಗಳ ಒಕ್ಕೂಟ ಯುನೈಟೆಡ್ ಕಿಸಾನ್ ಮೋರ್ಚಾದ ಒಂಬತ್ತು ಸದಸ್ಯರ ಸಮಿತಿಯು ಇಂದು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನವೆಂಬರ್ 29 ರಂದು ಘಾಝಿಪುರ ಗಡಿ ಹಾಗೂ ಟಿಕ್ರಿ ಗಡಿಯಿಂದ ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಸಂಸತ್ ಭವನಕ್ಕೆ ತೆರಳಲಿದ್ದಾರೆ. ಎಲ್ಲಿ ನಿಲ್ಲಿಸಿದರೂ ಅಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ರೈತ ಸಂಘಟನೆ ಹೇಳಿದೆ.
ನವೆಂಬರ್ 26 ರೊಳಗೆ ಸರಕಾರ ವಿವಾದಾತ್ಮಕ ಕೃಷಿ ಕಾನೂನನ್ನು ಹಿಂಪಡೆಯದಿದ್ದರೆ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ.
"ನವೆಂಬರ್ 26 ರವರೆಗೆ ಕೇಂದ್ರ ಸರಕಾರಕ್ಕೆ ಸಮಯವಿದೆ. ನಂತರ ನವೆಂಬರ್ 27 ರಿಂದ ರೈತರು ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳ ಮೂಲಕ ದಿಲ್ಲಿಯ ಸುತ್ತಮುತ್ತಲಿನ ಪ್ರತಿಭಟನಾ ಸ್ಥಳಗಳಲ್ಲಿ ಗಡಿ ತಲುಪಿ ಭದ್ರಕೋಟೆಗಳೊಂದಿಗೆ ಪ್ರತಿಭಟನಾ ಸ್ಥಳವನ್ನು ಬಲಪಡಿಸುತ್ತಾರೆ”ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ನವೆಂಬರ್ 1 ರಂದು ಟ್ವೀಟ್ ಮಾಡಿದ್ದರು.