ಎಂ.ಜಿ. ವಿವಿಯ ಜಾತಿನಿಂದನೆ ಆರೋಪಿ ಪ್ರೊಫೆಸರ್ ಉಚ್ಚಾಟನೆ ಸಾಂವಿಧಾನಿಕ ಮೌಲ್ಯಗಳಿಗೆ ಜಯ: ಪ್ರತಿಭಟನಾಕಾರರ ಸಂಭ್ರಮ

Photo: Facebook/Bhim Army Kerala
ಕೊಟ್ಟಾಯಂ,ನ.9: ಸುಮಾರು ಒಂದು ದಶಕದಿಂದಲೂ ತನಗೆ ಕಿರುಕುಳ ನೀಡುತ್ತಿರುವ ಪ್ರೊಫೆಸರ್ ಉಚ್ಚಾಟನೆ ಸೇರಿದಂತೆ ತನ್ನೆಲ್ಲ ಬೇಡಿಕೆಗಳನ್ನು ಇಲ್ಲಿಯ ಮಹಾತ್ಮಾ ಗಾಂಧಿ ವಿವಿಯು ಒಪ್ಪಿಕೊಂಡ ಬಳಿಕ ಸಂಶೋಧನಾ ವಿದ್ಯಾರ್ಥಿನಿ ದೀಪಾ ಪಿ.ಮೋಹನನ್ ಅವರು ತನ್ನ ಬೋಧಕರ ಜಾತಿ ತಾರತಮ್ಯವನ್ನು ಪ್ರತಿಭಟಿಸಿ ಅ.29ರಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಸೋಮವಾರ ಸಂಜೆ ಹಿಂದೆಗೆದುಕೊಂಡಿದ್ದಾರೆ.
‘ದೀಪಾ ಪಿಎಚ್ಡಿ ವಿದ್ಯಾರ್ಥಿನಿಯಾಗಿರುವ ಇಂಟರ್ನ್ಯಾಷನಲ್ ಆ್ಯಂಡ್ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ನ್ಯಾನೊಸೈನ್ಸ್ ಆ್ಯಂಡ್ ನ್ಯಾನೊಟೆಕ್ನಾಲಜಿ (ಐಐಯುಸಿಎನ್ಎನ್)ಯಿಂದ ಡಾ.ನಂದಕುಮಾರ ಕಳರಿಕ್ಕಲ್ ಅವರನ್ನು ‘ಸಂಪೂರ್ಣವಾಗಿ ತೆಗೆಯಲಾಗಿದೆ ’ಎಂದು ಎಂ.ಜಿ.ವಿವಿಯ ಕುಲಪತಿ ಡಾ.ಸಾಬು ಥಾಮಸ್ ಅವರು ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ. ಮೋಹನನ್ ವರ್ಷಗಳಿಂದಲೂ ತನ್ನನ್ನು ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದಾರೆ ಮತ್ತು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೀಪಾ ಆರೋಪಿಸಿದ್ದರು.
ನಮ್ಮ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಿರುವುದರಿಂದ ದೀಪಾ ತನ್ನ ಉಪವಾಸ ಮುಷ್ಕರವನ್ನು ಅಂತ್ಯಗೊಳಿಸಿದ್ದಾರೆ ಎಂದು ದಲಿತರ ಹಕ್ಕುಗಳ ಪರ ಹೋರಾಟಗಾರ ಹಾಗೂ ಭೀಮ್ ಆರ್ಮಿ ಕೇರಳದ ಉಪ ಮುಖ್ಯಸ್ಥ ಶ್ಯಾಮ್ ಮೋಹನ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಕುಲಪತಿಗಳೊಂದಿಗೆ ಮಾತುಕತೆಗಾಗಿ ಸೋಮವಾರ ಪ್ರತಿಭಟನಾಕಾರರನ್ನು ಆಹ್ವಾನಿಸಲಾಗಿತ್ತು ಮತ್ತು ನಮ್ಮ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿಯ ರಾಷ್ಟ್ರೀಯ ಉಪಾಧ್ಯಕ್ಷೆ ಅನು ರಾಜಿ ಪಿ.ಆರ್.ಅವರು ಹೇಳಿದರು.
ದೀಪಾರ ಸಂಶೋಧನೆಗೆ ಎಲ್ಲ ಅಗತ್ಯಗಳನ್ನು ಸಕಾಲದಲ್ಲಿ ಒದಗಿಸಲಾಗುವುದು ಮತ್ತು ಅವರ ರೀಸರ್ಚ್ ಫೆಲೋಶಿಪ್ ಅನ್ನು ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕುಲಪತಿಗಳು ಭರವಸೆ ನೀಡಿದ್ದಾರೆ.
‘ಇದು ವಿವಿಧ ವಿವಿಗಳಲ್ಲಿ ಜಾತಿವಾದದ ವಿರುದ್ಧ ಹೋರಾಡುತ್ತಿರುವ ನಮ್ಮೆಲ್ಲ ಸೋದರರು ಮತ್ತು ಸೋದರಿಯರಿಗೆ ಸಂದ ಗೆಲುವಾಗಿದೆ. ಇದು ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿದಿರುವ ಎಲ್ಲರ ಗೆಲುವಾಗಿದೆ. ಜಾತಿ ತಾರತಮ್ಯವು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಾಂವಿಧಾನಿಕವಾಗಿದೆ ’ಎಂದು ಶ್ಯಾಮ ಮೋಹನ ಹೇಳಿದರು.
ದೀಪಾರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ತನ್ನ ಪ್ರಯತ್ನವಾಗಿ ವಿವಿಯು ಈ ಮೊದಲು ಕಳರಿಕ್ಕಲ್ ಅವರನ್ನು ಐಐಯುಸಿಎನ್ಎನ್ ನಿರ್ದೇಶಕ ಹುದ್ದೆಯಿಂದ ತೆಗೆದುಹಾಕಿತ್ತು. ಆದರೆ ಅವರನ್ನು ಸಂಪೂರ್ಣವಾಗಿ ಉಚ್ಚಾಟಿಸಬೇಕೆಂದು ದೀಪಾ ಮತ್ತವರ ಬೆಂಬಲಿಗರು ಪಟ್ಟು ಹಿಡಿದಿದ್ದರು. ಜಾತಿ ತಾರತಮ್ಯದ ವಿರುದ್ಧ ಅವರ ಪ್ರತಿಭಟನೆಯು ಮಾಧ್ಯಮಗಳ ಗಮನ ಸೆಳೆದಿತ್ತು ಮತ್ತು ಶಾಸಕರು ಹಾಗೂ ಪ್ರತಿಪಕ್ಷಗಳು ಸೇರಿದಂತೆ ವಿವಿಧ ಕಡೆಗಳಿಂದ ಬೆಂಬಲ ವ್ಯಕ್ತವಾಗಿತ್ತು.
ಕಳರಿಕ್ಕಲ್ ಅವರ ದ್ವೇಷಸಾಧನೆಯಿಂದಾಗಿ ತನಗೆ ತನ್ನ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿರಲಿಲ್ಲ ಎಂದು ತಾಯಿಯೂ ಆಗಿರುವ ದೀಪಾ ಆರೋಪಿಸಿದರು. 2011 ಮಾರ್ಚ್ನಲ್ಲಿ ಎಂಫಿಲ್ ಅಭ್ಯರ್ಥಿಯಾಗಿ ಸೇರಿದಾಗಿನಿಂದಲೂ ಅವರು ಐಐಯುಸಿಎನ್ಎನ್ನಲ್ಲಿ ಸಂಶೋಧಕಿಯಾಗಿದ್ದಾರೆ. 2012,ಎಪ್ರಿಲ್ನಲ್ಲಿ ಎಂಫಿಲ್ ಪೂರ್ಣಗೊಳಿಸಿದ್ದ ಅವರು ಎರಡು ವರ್ಷಗಳ ಬಳಿಕ 2014ರಲ್ಲಿ ಅದೇ ವಿಭಾಗದಲ್ಲಿ ಪಿಎಚ್ಡಿಗಾಗಿ ಸೇರಿದ್ದರು. ಆಗ ಕಳರಿಕ್ಕಲ್ ಜಂಟಿ ನಿರ್ದೇಶಕರಾಗಿದ್ದರು.
ಕಳೆದ 10 ವರ್ಷಗಳಿಂದಲೂ ಸುಗಮವಾಗಿ ಅಧ್ಯಯನವನ್ನು ನಡೆಸಲು ತನಗೆ ಸಾಧ್ಯವಾಗಿರಲಿಲ್ಲ. ಇತರ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ಗಳನ್ನು ಕೈಗೊಳ್ಳಲು,ತನ್ನ ಸಂಶೋಧನಾ ಕಾರ್ಯಗಳಿಗೆ ಸಂಸ್ಥೆಯ ಸೌಲಭ್ಯಗಳನ್ನು ಬಳಸಿಕೊಳ್ಳಲು ನಿರಾಕರಿಸಲಾಗಿತ್ತು. ತನ್ನ ಎಂಫಿಲ್ ಪ್ರಬಂಧವನ್ನು ತಿರಸ್ಕರಿಸಲಾಗಿತ್ತು,ಇತರರೆದುರು ತನಗೆ ಬೆದರಿಕೆ ಒಡ್ಡಲಾಗಿತ್ತು. ಸಕಾಲದಲ್ಲಿ ತನ್ನ ಎಂಫಿಲ್ ಮತ್ತು ವರ್ಗಾವಣೆ ಸರ್ಟಿಫಿಕೇಟ್ಗಳನ್ನು ಒದಗಿಸಲೂ ನಿರಾಕರಿಸಲಾಗಿತ್ತು ಎಂದು ದೀಪಾ ಆರೋಪಿಸಿದ್ದಾರೆ.
ಕಳರಿಕ್ಕಲ್ 2015ರಲ್ಲಿ ಐಐಯುಸಿಎನ್ಎನ್ ಇರುವ ಭೌತಶಾಸ್ತ್ರ ವಿಭಾಗದಲ್ಲಿ ತನ್ನನ್ನು ಒಮ್ಮೆ ಕೂಡಿಹಾಕಿದ್ದರು ಎಂದೂ ದೀಪಾ ಆಪಾದಿಸಿದ್ದಾರೆ.
ಕೃಪೆ: Thewire.in







