ಬಿಜೆಪಿ ಕಲಬೆರಕೆ ಪಕ್ಷವಾಗಿ ಬದಲಾಗಿದೆ: ಪ್ರಮೋದ್ ಮುತಾಲಿಕ್

ಬೆಂಗಳೂರು: ಭಾರತೀಯ ಜನತಾ ಪಕ್ಷವು ಕಲಬೆರಕೆ ಪಕ್ಷವಾಗಿದೆ. ಬಿಜೆಪಿ ಪಕ್ಷದಲ್ಲಿರುವವರಲ್ಲಿ ಶೇ.60 ರಿಂದ 70ರಷ್ಟು ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ. ಇನ್ನು ಉಳಿದ ಶೇ.30 ರಿಂದ 40ರಷ್ಟು ಮಾತ್ರ ಮೂಲ ಬಿಜೆಪಿಯವರಾಗಿದ್ದಾರೆ. ಹಾಗೆಯೇ ಕಮ್ಯುನಿಸ್ಟರೂ ಬಿಜೆಪಿಯಲ್ಲಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.
ಮಂಗಳವಾರ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಇಂದು ಮೂಲ ಬಿಜೆಪಿಯಾಗಿ ಉಳಿದಿಲ್ಲ. ಬಿಜೆಪಿಗೆ ಬೇರೆ ಪಕ್ಷದವರು ಬಂದಿದ್ದು, ಅದೊಂದು ಕಲಬೆರಕೆ ಪಕ್ಷವಾಗಿ ಬದಲಾಗಿದೆ. ಹಿಂದುತ್ವ, ಧರ್ಮ, ದೇಶ, ಸಂಸ್ಕೃತಿ ಏನೆಂಬುದನ್ನು ಗೊತ್ತಿಲ್ಲದವರು ಹಾಗೂ ಮಾನ-ಮರ್ಯಾದೆ ಇಲ್ಲದವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದ ಅವರು, ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ. ಕೇವಲ ಹಿಂದುತ್ವ ಹೋರಾಟ ಮಾತ್ರ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್‌ನವರು ಟೆರರಿಸ್ಟ್ಗಳನ್ನು ಬೆಳೆಸಿದ್ದಾರೆ. ಅವರಿಗೆ ಹಿಂದುತ್ವ ಇಲ್ಲ. ಅವರಿಗೆ ಲೂಟಿ ಮಾತ್ರ ತಿಳಿದಿದೆ. ಅಂಥವರು ಇಂದು ಬಿಜೆಪಿಯಲ್ಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ.





