ನೈಜರ್: ಶಾಲೆಯಲ್ಲಿ ಬೆಂಕಿ ದುರಂತ ಕನಿಷ್ಟ 26 ಮಕ್ಕಳ ಸಾವು

ಸಾಂದರ್ಭಿಕ ಚಿತ್ರ
ನಿಯಾಮೆ, ನ.9: ಪಶ್ಚಿಮ ಆಫ್ರಿಕಾದ ನೈಜರ್ ದೇಶದ ಶಾಲೆಯೊಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ ಕನಿಷ್ಟ 26 ಮಕ್ಕಳು ಮೃತಪಟ್ಟಿದ್ದು 13 ಮಕ್ಕಳು ಗಾಯಗೊಂಡಿದ್ದಾರೆ ಎಂದು ಮರಾಡಿ ನಗರದ ಗವರ್ನರ್ ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ದಕ್ಷಿಣ ನೈಜರ್ ನ ಮರಾಡಿ ನಗರದ ಶಾಲೆಯಲ್ಲಿ ಈ ದುರಂತ ಸಂಭವಿಸಿದೆ. ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿರುವ ನೈಜರ್ನಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಮರದ ಹಲಗೆಯನ್ನು ಜೋಡಿಸಿ, ಹುಲ್ಲಿನ ಮಾಡು ಇರುವ ಶಾಲೆಗಳನ್ನು ನಿರ್ಮಿಸಲಾಗುತ್ತದೆ. ಶಾಲೆಯಲ್ಲಿ ಸಂಭವಿಸಿದ ಬೆಂಕಿ ಮರದ ಹಲಗೆ ಮತ್ತು ಹುಲ್ಲಿನಿಂದ ಶೀಘ್ರ ವ್ಯಾಪಿಸಿದೆ. ತರಗತಿಯೊಳಗಿದ್ದ 5ರಿಂದ 6 ವರ್ಷದೊಳಗಿನ ಮಕ್ಕಳನ್ನು ರಕ್ಷಿಸಲು ಶಾಲೆಯ ಆಡಳಿತ ಪ್ರಯತ್ನಿಸಿದೆ. ಆದರೆ ಕನಿಷ್ಟ 26 ಮಕ್ಕಳು ಮೃತಪಟ್ಟಿದ್ದು 13 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 4 ಮಕ್ಕಳ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ ಎಂದು ಮರಾಡಿ ನಗರದ ಮೇಯರ್ ಚೈಬು ಅಬೂಬಕರ್ ಹೇಳಿದ್ದಾರೆ.
ಬೆಂಕಿಯಿಂದಾಗಿ ಶಾಲೆ ಸಂಪೂರ್ಣ ಸುಟ್ಟುಹೋಗಿದೆ. ಮರ ಮತ್ತು ಹುಲ್ಲಿನಿಂದ ಮಾಡುವ ಶಾಲೆಗಳು ಅಪಾಯಕಾರಿ ಎಂದು ಈ ಹಿಂದೆಯೇ ಎಚ್ಚರಿಸಿದ್ದೆವು. ಆದರೆ ಅಧಿಕಾರಿಗಳು ಕಿವಿಗೊಡಲಿಲ್ಲ. ಮರ ಮತ್ತು ಹುಲ್ಲಿನ ಶಾಲೆಯ ಬದಲು ಮರದಡಿ ಪಾಠ ಮಾಡುವುದು ಸುರಕ್ಷಿತ ಎಂದು ನೈಜರ್ ಶಿಕ್ಷಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸೂಫ್ ಅರ್ಝಿಕ ಹೇಳಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ನಿಯಾಮೆ ನಗರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 20 ಮಕ್ಕಳು ಸಜೀವ ದಹನವಾಗಿದ್ದರು. ಈ ದುರಂತದ ಬಳಿಕ ಪ್ರತಿಕ್ರಿಯೆ ನೀಡಿದ್ದ ಅಧ್ಯಕ್ಷ ಮುಹಮ್ಮದ್ ಬಝೌಮ್, ಮರದಿಂದ ನಿರ್ಮಿಸಿರುವ ಶಾಲೆಗಳ ಗೋಡೆಯನ್ನು ಶೀಘ್ರ ಬದಲಾಯಿಸಲಾಗುವುದು ಎಂದು ಭರವಸೆ ನೀಡಿದ್ದರು.







