ಭಾರತದೊಂದಿಗೆ ಕೋವಿಡ್ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ 96 ದೇಶಗಳ ಒಪ್ಪಿಗೆ: ಸಚಿವ ಮಾಂಡವೀಯ

ಹೊಸದಿಲ್ಲಿ,ನ.9: ಭಾರತದೊಂದಿಗೆ ಕೋವಿಡ್ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ 96 ದೇಶಗಳು ಒಪ್ಪಿಕೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ಅವರು ಮಂಗಳವಾರ ತಿಳಿಸಿದ್ದಾರೆ.
ಭಾರತದ ಲಸಿಕೆ ಪ್ರಮಾಣಪತ್ರಗಳಿಗೆ ಮಾನ್ಯತೆಯನ್ನು ಪಡೆದುಕೊಳ್ಳಲು ಮತ್ತು ತನ್ಮೂಲಕ ಶಿಕ್ಷಣ,ವ್ಯವಹಾರ ಹಾಗೂ ಪ್ರವಾಸೋದ್ಯಮ ಉದ್ದೇಶಕ್ಕಾಗಿ ಭಾರತೀಯರ ವಿದೇಶ ಪ್ರಯಾಣಗಳನ್ನು ಸುಗಮಗೊಳಿಸಲು ಇತರ ದೇಶಗಳೊಂದಿಗೆ ಸರಕಾರವು ಸಂವಹನವನ್ನು ಮುಂದುವರಿಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ 96 ದೇಶಗಳು ಲಸಿಕೆ ಪ್ರಮಾಣಪತ್ರಕ್ಕೆ ಪರಸ್ಪರ ಮಾನ್ಯತೆ ನೀಡಲು ಒಪ್ಪಿಕೊಂಡಿವೆ. 2021 ಅ.20ರಂದು ಕೇಂದ್ರ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳಂತೆ ಈ ದೇಶಗಳಿಂದ ಪ್ರಯಾಣಿಸುವ ಜನರಿಗೆ ಆಗಮನದ ಬಳಿಕ ಕೆಲವು ಸಡಿಲಿಕೆಗಳನ್ನು ಒದಗಿಸಲಾಗುವುದು.
ವಿದೇಶಗಳಿಗೆ ಪ್ರಯಾಣಿಸಲು ಬಯಸುವವರು ಕೋವಿನ್ ಪೋರ್ಟಲ್‌ನಿಂದಲೂ ಅಂತರರಾಷ್ಟ್ರೀಯ ಪ್ರಯಾಣ ಲಸಿಕೆ ಸರ್ಟಿಫಿಕೇಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವಾಲಯವು ತಿಳಿಸಿದೆ.
ಕೆನಡಾ,ಅಮೆರಿಕ,ಬ್ರಿಟನ್,ಫ್ರಾನ್ಸ್,ಜರ್ಮನಿ,ಸ್ಪೇನ್,ರಷ್ಯಾ,ಆಸ್ಟ್ರೇಲಿಯ ಇತ್ಯಾದಿಗಳು ಈ 96 ದೇಶಗಳ ಪಟ್ಟಿಯಲ್ಲಿವೆ.





