ರಫೇಲ್ ಹಗರಣದ ಜಾಡು ಪ್ರಧಾನಿ ನಿವಾಸದ ಬಾಗಿಲಲ್ಲಿ ಅಂತ್ಯಗೊಳ್ಳುತ್ತದೆ: ಕಾಂಗ್ರೆಸ್ ಟೀಕಾಪ್ರಹಾರ
"ಮೋದಿ ಸರಕಾರ ಭ್ರಷ್ಟಾಚಾರ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ"
photo:twitter/@Pawankhera
ಹೊಸದಿಲ್ಲಿ,ನ.9: ಮೋದಿ ಸರಕಾರವು ರಫೇಲ್ ಹಗರಣದಲ್ಲಿಯ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಮತ್ತು ಒಪ್ಪಂದದಲ್ಲಿ ಮಧ್ಯವರ್ತಿ ಸುಷೇನ್ ಗುಪ್ತಾನ ಪಾತ್ರದ ಬಗ್ಗೆ ಸಾಕ್ಷಾಧಾರ ದೊರೆತು 36 ತಿಂಗಳುಗಳಾದರೂ ಎಫ್ಐಆರ್ ದಾಖಲಿಸಲು ಹಿಂದೇಟು ಹೊಡೆಯುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಇತ್ತೀಚಿಗೆ ಫ್ರೆಂಚ್ ಆನ್ಲೈನ್ ಜರ್ನಲ್ ಮೀಡಿಯಾಪಾರ್ಟ್ ಪ್ರಕಟಿಸಿರುವ ವರದಿಯ ಹಿನ್ನೆಲೆಯಲ್ಲಿ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ ಖೇರಾ ಅವರು, ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಮುಚ್ಚಿಡಲು ಮೋದಿ ಸರಕಾರವು ಪ್ರಯತ್ನಿಸುತ್ತಿದೆ. ಬಿಜೆಪಿ ಸರಕಾರವು ರಾಷ್ಟ್ರೀಯ ಭದ್ರತೆಯನ್ನು ತ್ಯಾಗ ಮಾಡಿದೆ,ಭಾರತೀಯ ಸಶಸ್ತ್ರ ಪಡೆಗಳ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡಿದೆ ಮತ್ತು ಬೊಕ್ಕಸಕ್ಕೆ 41,000 ಕೋ.ರೂ.ಗಳ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಜಾಡು ಪ್ರಧಾನಿ ನಿವಾಸದ ಬಾಗಿಲಿಗೆ ತಲುಪಬಲ್ಲದು. 2018,ಅ.4ರಂದು ಬಿಜೆಪಿಯ ಇಬ್ಬರು ಮಾಜಿ ಕೇಂದ್ರ ಸಚಿವರಾದ ಅರುಣ ಶೌರಿ ಮತ್ತು ಯಶವಂತ ಸಿನ್ಹಾ ಅವರು ಆಗಿನ ಸಿಬಿಐ ನಿರ್ದೇಶಕ ಅಲೋಕ ವರ್ಮಾ ಅವರಿಗೆ ಕಡತವೊಂದನ್ನು ಸಲ್ಲಿಸಿದಾಗಲೇ ಈ ಪ್ರಕರಣದಲ್ಲಿಯ ಸಾಕ್ಷಾಧಾರವು ಮೊದಲ ಬಾರಿ ಬೆಳಕಿಗೆ ಬಂದಿತ್ತು.
ಅ.11ರಂದು ಮಾರಿಷಸ್ ಕೂಡ ಮಧ್ಯವರ್ತಿ ಗುಪ್ತಾ ಕುರಿತು ದಾಖಲೆಗಳನ್ನು ಸಿಬಿಐಗೆ ಕಳುಹಿಸಿತ್ತು ಎಂದ ಖೇರಾ,ಆದರೆ ಈ ಹಗರಣದ ಜಾಡು ಹಿಡಿಯುವ ಬದಲು ಪ್ರಧಾನಿ ಮೋದಿ ನೇತೃತ್ವದ ಸಮಿತಿಯು ಮಧ್ಯರಾತ್ರಿಯಲ್ಲಿ ಅಲೋಕ ವರ್ಮಾರನ್ನು ಹುದ್ದೆಯಿಂದ ಎತ್ತಂಗಡಿಗೊಳಿಸಿತ್ತು ಮತ್ತು ಸಿಬಿಐ ಕೇಂದ್ರಕಚೇರಿಯ ಮೇಲೆ ದಾಳಿ ನಡೆಸಿತ್ತು. ಇದು ರಫೇಲ್ ಭೂತವನ್ನು ಹುಗಿದುಹಾಕಲು ನಡೆಸಿದ್ದ ಸಂಘಟಿತ ಸಂಚಿನ ಭಾಗವಾಗಿತ್ತು ಎಂದು ಆರೋಪಿಸಿದರು.
2019,ಮಾ.26ರಂದು ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಾನ ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಈ.ಡಿ.)ವು ಆತನ ವಶದಲ್ಲಿದ್ದ ರಕ್ಷಣಾ ಸಚಿವಾಲಯದ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಂಡಿತು್ತ. ಈ ದಾಖಲೆಗಳಲ್ಲಿ ಭಾರತೀಯ ಸಂಧಾನಕಾರರ ನಿಲುವು ಮತ್ತು ವಿಶೇಷವಾಗಿ ಅವರು ವಿಮಾನದ ಬೆಲೆಯನ್ನು ಹೇಗೆ ಲೆಕ್ಕ ಹಾಕಿದ್ದರು ಎಂಬ ಕುರಿತು ವಿವರಗಳಿದ್ದವು.
ಜೊತೆಗೆ ಯುರೋಫೈಟರ್ನ ಭಾರತ ಸರಕಾರಕ್ಕೆ ಶೇ.20ರಷ್ಟು ರಿಯಾಯತಿಯನ್ನು ನೀಡುವ ಪ್ರತಿ ಕೊಡುಗೆಯ ವಿವರಗಳೂ ಇದ್ದವು ಎಂದ ಖೇರಾ,ರಾಜಕೀಯ ಹೈಕಮಾಂಡ್ ಜೊತೆ ಮಾತುಕತೆಯನ್ನು ಏರ್ಪಡಿಸುವ ಪ್ರಸ್ತಾವವನ್ನು ಮುಂದಿಟ್ಟು ಗುಪ್ತಾ 2014,ಜೂ.24ರಂದು ಡಸಾಲ್ಟ್ ಗೆ ಕಳುಹಿಸಿದ್ದ ಟಿಪ್ಪಣಿಯನ್ನೂ ವಶಪಡಿಸಿಕೊಳ್ಳಲಾಗಿತ್ತು ಎಂದು ಆರೋಪಿಸಿದರು. ಮೋದಿ ಸರಕಾರದ ‘ಹೈಕಮಾಂಡ್’ ಜೊತೆ ಇಂತಹ ಸಭೆ ನಡೆದಿತ್ತೇ ಎಂದು ಪ್ರಶ್ನಿಸಿದರು.
ಸಾಕ್ಷಾಧಾರಗಳಿದ್ದರೂ ಈ.ಡಿ. ಹಗರಣದಲ್ಲಿ ತನಿಖೆಯನ್ನೇಕೆ ಮುಂದುವರಿಸಿರಲಿಲ್ಲ? ಮೋದಿ ಸರಕಾರವೇಕೆ ಡಸಾಲ್ಟ್,ರಾಜಕೀಯ ಕಾರ್ಯಾಧಿಕಾರಿ ಅಥವಾ ದಾಖಲೆಗಳನ್ನು ಸೋರಿಕೆ ಮಾಡಿದ್ದ ರಕ್ಷಣಾ ಸಚಿವಾಲಯದ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿರಲಿಲ್ಲ? ಭಾರತದ ರಾಷ್ಟ್ರೀಯ ರಹಸ್ಯಗಳನ್ನು ಮಾರಾಟ ಮಾಡಿದ್ದ ‘ಚೌಕಿದಾರ್’ ಯಾರು ಎಂದೂ ಖೇರಾ ಪ್ರಶ್ನಿಸಿದರು.