ರೇಸ್ ಕುದುರೆಗಳ ರಕ್ಷಣೆ ಕೋರಿ ಅರ್ಜಿ: ಕಾಮಗಾರಿಯ ಪ್ರಗತಿ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ನ.9: ಟರ್ಫ್ಕ್ಲಬ್‌ನಲ್ಲಿ ರೇಸ್ ಕುದುರೆಗಳನ್ನು ಹೀನಾಯವಾಗಿ ನಡೆಸಿಕೊಳ್ಳುವ ಮೂಲಕ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದತೆ ಕೈಗೊಂಡಿರುವ ಕಾಮಗಾರಿಯ ಪ್ರಗತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಬೆಂಗಳೂರು ಟರ್ಫ್ ಕ್ಲಬ್(ಬಿಟಿಸಿ)ಗೆ ಸೂಚನೆ ನೀಡಿದೆ. ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
ಈ ಸಂಬಂಧ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕಾಮಗಾರಿಯ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಿತು.
800 ಕುದುರೆಗಳ ಲಾಯಗಳನ್ನು ಮೇಲ್ದರ್ಜೆಗೇರಿಸಲು ಸುಮಾರು ಒಂದೂವರೆ ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ಬಿಟಿಸಿ ಪರ ಹಿರಿಯ ವಕೀಲರು ಪೀಠಕ್ಕೆ ಹೇಳಿಕೆ ನೀಡಿ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಾಗುವುದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿರುವ ಕುದುರೆಗಳನ್ನು ರೇಸ್‌ನಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಅನಾರೋಗ್ಯಕ್ಕೀಡಾದ, ಗಾಯಗೊಂಡ ಕುದುರೆಗಳನ್ನೂ ಕೂಡ ರೇಸ್‌ನಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅವುಗಳಿಗೆ ಸರಿಯಾಗಿ ಚಿಕಿತ್ಸೆ ಕೊಡಿಸುತ್ತಿಲ್ಲ, ಆರೈಕೆ ಮಾಡುತ್ತಿಲ್ಲ. ಹೀಗಾಗಿ ಅವು ಸಾವಿಗೀಡಾಗುತ್ತಿವೆ ಎಂದು ಆರೋಪಿಸಿ ಕ್ಯೂಪಾ ಪಿಐಎಲ್ ಸಲ್ಲಿಸಿತ್ತು.
ಈ ಅರ್ಜಿ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪೀಠ ಡಾ. ಕ್ಯಾಪ್ಟನ್ ರವಿ ರಾಯದುರ್ಗ ಅವರಿಗೆ ಸೂಚಿಸಿತ್ತು. ವರದಿ ನೀಡಿದ್ದ ಅಧಿಕಾರಿ ಬಿಟಿಸಿಯಲ್ಲಿರುವ ಶೇ 80ರಷ್ಟು ಕುದುರೆ ಲಾಯಗಳು ಸುರಕ್ಷಿತವಾಗಿಲ್ಲ. ಅವುಗಳನ್ನು ಹೊಸದಾಗಿ ಮತ್ತು ವೈಜ್ಞಾನಿಕವಾಗಿ ನಿರ್ಮಿಸಬೇಕಿದೆ ಎಂದು ಶಿಫಾರಸು ಮಾಡಿದ್ದರು. ವರದಿ ಅನುಷ್ಠಾನಗೊಳಿಸಲು ಹಿಂದೇಟು ಹಾಕಿದ್ದರಿಂದ ಕ್ಲಬ್‌ಗೆ ತರಾಟೆ ತೆಗೆದುಕೊಂಡಿದ್ದ ಪೀಠ, ಕುದುರೆಗಳನ್ನು ಸ್ಥಳಾಂತರಿಸಲಾಗದಿದ್ದರೆ ರೇಸ್ ಚಟುವಟಿಕೆ ನಿಲ್ಲಿಸಿ, ಕುದುರೆಗಳನ್ನು ಸ್ಥಳಾಂತರಿಸಿ ಎಂದು ಮೌಖಿಕವಾಗಿ ಸೂಚಿಸಿತ್ತು.







