ಪ್ರಕರಣಗಳ ತನಿಖೆಗೆ ಸಿಬಿಐ ಕೋರಿಕೆಗಳು ರಾಜ್ಯಗಳ ಬಳಿ ಬಾಕಿಯಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ಹೊಸದಿಲ್ಲಿ,ನ.9: ಪ್ರಕರಣಗಳ ತನಿಖೆಗಾಗಿ ವಿಶೇಷ ಅನುಮತಿಯನ್ನು ಕೋರಿ ಸಿಬಿಐ ಸಲ್ಲಿಸಿರುವ ಮನವಿಗಳು ತನಿಖಾ ಸಂಸ್ಥೆಗೆ ಸಾಮಾನ್ಯ ಅನುಮತಿಯನ್ನು ಹಿಂದೆಗೆದುಕೊಂಡಿರುವ ಎಂಟು ರಾಜ್ಯಗಳ ಬಳಿ ಬಾಕಿಯಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು ‘ಇದು ಅಪೇಕ್ಷಣಿಯ ನಿಲುವಲ್ಲ ’ಎಂದು ಹೇಳಿದೆ.
ಮಹಾರಾಷ್ಟ್ರ,ಪಂಜಾಬ್,ರಾಜಸ್ಥಾನ,ಪ.ಬಂಗಾಳ,ಜಾರ್ಖಂಡ್,ಛತ್ತೀಸ್ಗಢ,ಕೇರಳ ಮತ್ತು ಮಿಝೋರಾಮ್ ಸರಕಾರಗಳ ಬಳಿ 2018ರಿಂದಲೂ ಇಂತಹ ಸುಮಾರು 150 ಮನವಿಗಳು ಬಾಕಿಯಿವೆ ಎಂದು ತಿಳಿಸಿ ಸಿಬಿಐ ನಿರ್ದೇಶಕರು ಸಲ್ಲಿಸಿರುವ ಅಫಿಡವಿಟ್ ಅನ್ನು ಸೋಮವಾರ ವಿಚಾರಣೆ ಸಂದರ್ಭ ಪ್ರಸ್ತಾಪಿಸಿದ ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಪೀಠವು,ವಂಚನೆ,ಫೋರ್ಜರಿ ಮತ್ತು ಹಣ ದುರುಪಯೋಗ ಆರೋಪಗಳಿಗೆ ಮತ್ತು ಬ್ಯಾಂಕ್ ವಂಚನೆ ಪ್ರಕರಣಗಳಿಗೂ ಸಂಬಂಧಿಸಿದಂತೆ ಈ ಮನವಿಗಳನ್ನು ಸರಕಾರಗಳಿಗೆ ಸಲ್ಲಿಸಲಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.
ಶೇ.18ರಷ್ಟು ಪ್ರಕರಣಗಳು ಭ್ರಷ್ಟ ಸರಕಾರಿ ಅಧಿಕಾರಿಗಳದ್ದಾಗಿವೆ. ಶೇ.78ರಷ್ಟು ಪ್ರಕರಣಗಳು ಬಾಕಿಯಿವೆ ಎನ್ನಲಾಗಿದೆ. ಇದು ಅಪೇಕ್ಷಣೀಯವಲ್ಲ ಎಂದು ಪೀಠವು ಹೇಳಿತು.
ಸಿಬಿಐ ಪ್ರಕರಣಗಳಲ್ಲಿ ನ್ಯಾಯಾಲಯಗಳು ತಡೆಯಾಜ್ಞೆಗಳನ್ನು ನೀಡುವ ಮೂಲಕ ವಿಚಾರಣೆಯನ್ನು ವಿಳಂಬಿಸುತ್ತಿರುವುದರ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿದ ಪೀಠವು,ಇವೆರಡೂ ವಿಷಯಗಳು ಬಗೆಹರಿಯಬೇಕಿವೆ ಎಂದು ಹೇಳಿತಲ್ಲದೆ,ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಅವಗಾಹನೆಗೆ ಒಪ್ಪಿಸಿತು.
ಸಿಬಿಐ ಎದುರಿಸುತ್ತಿರುವ ಅಡಚಣೆಗಳು ಮತ್ತು ಪ್ರಕರಣಗಳ ವಿಚಾರಣೆಯನ್ನು ಬಲಗೊಳಿಸಲು ಅದು ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯವು ಕಳೆದ ತಿಂಗಳು ಪ್ರಶ್ನಿಸಿತ್ತು. ಇದಕ್ಕೆ ಉತ್ತರವಾಗಿ ಸಿಬಿಐ ಅಫಿಡವಿಟ್ ಸಲ್ಲಿಸಿತ್ತು. ಸಿಬಿಐನ ಯಶಸ್ಸಿನ ದರ ಕಡಿಮೆಯಿದೆ ಎಂಬ ಸಾಮಾನ್ಯ ಗ್ರಹಿಕೆಯಿದೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.
ಈ ಎಂಟು ರಾಜ್ಯಗಳು ತನಗೆ ಸಾಮಾನ್ಯ ಅನುಮತಿಯನ್ನು ಹಿಂದೆಗೆದುಕೊಂಡಿವೆ ಮತ್ತು ಪ್ರತಿಯೊಂದೂ ಪ್ರಕರಣಕ್ಕೆ ತಾನು ಪ್ರತ್ಯೇಕವಾಗಿ ಅನುಮತಿಯನ್ನು ಕೋರಬೇಕಾಗಿದೆ ಮತ್ತು ಇದು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ತನ್ನ ಉತ್ತರದಲ್ಲಿ ತಿಳಿಸಿರುವ ಸಿಬಿಐ,ನ್ಯಾಯಾಲಯಗಳು ನೀಡುವ ತಡೆಯಾಜ್ಞೆಗಳು ವಿಳಂಬಕ್ಕೆ ಕೊಡುಗೆಯನ್ನು ಸಲ್ಲಿಸುತ್ತಿವೆ. ಈವರೆಗೆ 12,000ಕ್ಕೂ ಅಧಿಕ ಪ್ರಕರಣಗಳಲ್ಲಿ ತಡೆಯಾಜ್ಞೆಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿಯೊಂದಿಗೆ ವಿಳಂಬಕ್ಕಾಗಿ ಕ್ಷಮೆಯನ್ನು ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ಹಿಂದಿನ ವಿಚಾರಣೆ ಸಂದರ್ಭದಲ್ಲಿ ಕಡತವು ಉಪ ಕಾನೂನು ಸಲಹೆಗಾರರ ಅಭಿಪ್ರಾಯಕ್ಕಾಗಿ 2018,ಮೇ 9ರಿಂದ 2019,ಜ.19ರವರೆಗೆ ಅವರ ಕಚೇರಿಯಲ್ಲಿ ಬಾಕಿಯಾಗಿತ್ತು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಸೋಮವಾರದ ವಿಚಾರಣೆ ವೇಳೆ ‘ಯಾರನ್ನೂ ಉತ್ತರದಾಯಿಯನ್ನಾಗಿಸಿಲ್ಲ’ ಎನ್ನುವುದು ಸಮಸ್ಯೆಯಾಗಿದೆ ಎಂದು ಹೇಳಿತು. ವಿಳಂಬವು ಅನುದ್ದಿಷ್ಟವಾಗಿತ್ತು ಎಂದು ಅಫಿಡವಿಟ್ನಲ್ಲಿ ವಿವರಿಸಿದ್ದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ ನ್ಯಾಯಾಲಯವು ಇದು ಅಸಮರ್ಥತೆಯಾಗಿದೆ ಎಂದು ಹೇಳಿತು.
ವಿಳಂಬಕ್ಕಾಗಿ ಹೊಣೆಗಾರಿಕೆಯನ್ನು ನಿಗದಿಗೊಳಿಸಲು ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಅಫಿಡವಿಟ್ನಲ್ಲಿ ಹೇಳಿರುವುದನ್ನು ಗಮನಿಸಿದ ಪೀಠವು,25,000 ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿಯಿರಿಸುವಂತೆ ಮತ್ತು ವಿಳಂಬಕ್ಕೆ ಹೊಣೆಯಾದವರಿಂದ ಅದನ್ನು ವಸೂಲು ಮಾಡುವಂತೆ ಸಿಬಿಐಗೆ ನಿರ್ದೇಶ ನೀಡಿತು.