ಪರೀಕ್ಷೆಯಲ್ಲಿ ನಕಲು ತಡೆಯಲು 'ಡಾಟಾ ಅನಾಲಿಟಿಕ್ಸ್' ಬಳಸಲಿರುವ ಸಿಬಿಎಸ್ಇ
ಹೊಸದಿಲ್ಲಿ, ನ. 9: ಮುಂಬರುವ 10 ಹಾಗೂ 12ನೇ ತರಗತಿಯ ಮಂಡಳಿ ಪರೀಕ್ಷೆಯ ಆರಂಭದೊಂದಿಗೆ ನಕಲು ಮಾಡುವುದು ಹಾಗೂ ಅಕ್ರಮಗಳನ್ನು ತಡೆಗಟ್ಟಲು ಪರೀಕ್ಷಾ ಕೇಂದ್ರಗಳಲ್ಲಿ ಕೇವಲ ಸಿಸಿಟಿವಿ ಕಣ್ಗಾವಲು ಹಾಗೂ ಬಾಹ್ಯ ಪರಿವೀಕ್ಷಕರು ಮಾತ್ರವಲ್ಲದೆ, ಡಾಟಾ ಅನಾಲಿಟಿಕ್ಸ್ ಅನ್ನು ಬಳಸಲು ಸಿಬಿಎಸ್ಇ ಬಯಸಿದೆ.
ಸಿಬಿಎಸ್ಇಯ 10 ಹಾಗೂ 12ನೇ ತರಗತಿಯ 2021-22 ಶೈಕ್ಷಣಿಕ ಅವಧಿಯ ಮಂಡಳಿ ಪರೀಕ್ಷೆ ಎರಡು ಭಾಗಗಳಾಗಿ ನಡೆಯಲಿದೆ. ಮೊದಲ ಅವಧಿಯ ಪರೀಕ್ಷೆ ನವೆಂಬರ್ 16ರಿಂದ ಆರಂಭವಾಗಲಿದೆ. ಇದು ಬಹು ಆಯ್ಕೆಯ ಪ್ರಶ್ನೆ ಆಧಾರಿತ ಪರೀಕ್ಷೆ . ಇದನ್ನು ಒಎಂಆರ್ ಶೀಟ್ ಮೂಲಕ ನಡೆಸಲಾಗುತ್ತದೆ.
ದೇಶಾದಾದ್ಯಂತ ನಡೆಯಲಿರುವ ಸಿಬಿಎಸ್ಇ ಮಂಡಳಿ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಹಾಗೂ ನಕಲು ಮಾಡುವುದನ್ನು ಪತ್ತೆ ಹಚ್ಚಲು ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಾಧುನಿಕ ಡಾಟಾ ಅನಾಲಿಟಿಕ್ಸ್ ಅನ್ನು ಬಳಸಲಾಗುವುದು ಎಂದು ಮಂಗಳವಾರ ಸಿಬಿಎಸ್ಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ‘‘ಎನ್ಎಎಸ್, ಸಿಟಿಇಟಿ ಹಾಗೂ ಸಿಬಿಎಸ್ಇ ನಡೆಸುವ ಮಂಡಳಿ ಪರೀಕ್ಷೆಯನ್ನು ಸಶಕ್ತಗೊಳಿಸಲು ಈ ಡಾಟಾ ಅನಾಲಿಟಿಕ್ಸ್ ಅನ್ನು ಬಳಸಲಾಗುವುದು’’ ಎಂದು ಸಿಬಿಎಸ್ಇ ಹೇಳಿಕೆ ತಿಳಿಸಿದೆ.