ಅತ್ಯಾಚಾರ, ಕೊಲೆ ಪ್ರಕರಣದ ದೋಷಿಯ ಗಲ್ಲು ಶಿಕ್ಷೆಯನ್ನು ಜೀವಾವಧಿ ಆಗಿ ಪರಿವರ್ತಿಸಿದ ಸುಪ್ರೀಂ ಕೋರ್ಟ್
ಸಂತ್ರಸ್ತರ ವಯಸ್ಸಿನ ಆಧಾರದಲ್ಲಿ ಗಲ್ಲು ಶಿಕ್ಷೆ ನೀಡಲಾಗದು ಎಂದ ನ್ಯಾಯಾಲಯ

ಹೊಸದಿಲ್ಲಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರ ಕಡಿಮೆ ವಯಸ್ಸನ್ನು ಮರಣದಂಡನೆ ವಿಧಿಸಲು ಈ ನ್ಯಾಯಾಲಯವು ಪರಿಗಣಿಸಿಲ್ಲ. ಸಂತ್ರಸ್ತರ ವಯಸ್ಸಿನ ಆಧಾರದಲ್ಲಿ ಗಲ್ಲು ಶಿಕ್ಷೆ ನೀಡಲಾಗದು ಎಂದು ಕಳೆದ 40 ವರ್ಷಗಳಲ್ಲಿ ಇದೇ ರೀತಿಯ 67 ಪ್ರಕರಣಗಳನ್ನು ವಿಶ್ಲೇಷಿಸಿದ ತನ್ನ ತೀರ್ಪನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯದ ಮರಣದಂಡನೆ ತೀರ್ಪು ವಿರುದ್ಧ ತಪ್ಪಿತಸ್ಥ ಈರಪ್ಪ ಸಿದ್ದಪ್ಪ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ನಿರ್ಣಾಯಕ ವಿಶ್ಲೇಷಣೆ ನಡೆಸಿದೆ. ಕರ್ನಾಟಕ ಹೈಕೋರ್ಟ್ ಮಾರ್ಚ್ 6, 2017 ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿತು.
2010 ರಲ್ಲಿ ಕರ್ನಾಟಕದ ಖಾನಾಪುರ ಗ್ರಾಮದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಸಿದ್ದಪ್ಪ ಅಪರಾಧಿ ಎಂದು ತೀರ್ಪು ನೀಡಲಾಯಿತು ಮತ್ತು ಘಟನೆಯ ಬಳಿಕ ಸಂತ್ರಸ್ತೆಯ ಶವವನ್ನು ಚೀಲದಲ್ಲಿ ಹಾಕಿ ಬೆನ್ನಿಹಳ್ಳ ಹೊಳೆಗೆ ಎಸೆದಿದ್ದನು.
ನ್ಯಾಯಮೂರ್ತಿಗಳಾದ ಎಲ್ . ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಪೀಠವು ಸಿದ್ದಪ್ಪ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಅಪರಾಧಗಳಿಗೆ ಶಿಕ್ಷೆಯನ್ನು ದೃಢಪಡಿಸಿತು. ಆದರೆ ಮರಣದಂಡನೆಯನ್ನು ರದ್ದುಗೊಳಿಸಿತು. ಗಲ್ಲು ಶಿಕ್ಷೆಯನ್ನು 30 ವರ್ಷಗಳ ಅವಧಿಗೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ.







