ಬಿಎಸ್ಎಲ್, ಬಿಇಎಲ್ ಪ್ರಕರಣ: ಈಡಿಯಿಂದ 61.38 ಕೋಟಿ ರೂ. ಮುಟ್ಟುಗೋಲು

ಲಕ್ನೋ, ನ. 9: ಭೂಷಣ್ ಸ್ಟೀಲ್ ಲಿಮಿಟೆಡ್ (ಬಿಎಸ್ಎಲ್), ಭೂಷಣ್ ಎನರ್ಜಿ ಲಿಮಿಟೆಡ್ (ಬಿಇಎಲ್) ಹಾಗೂ ಇತರ ಕೆಲವು ಸಂಸ್ಥೆಗಳ ಕುರಿತ ತನ್ನ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ 61.38 ಕೋಟಿ ರೂಪಾಯಿ ಸೊತ್ತನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಬಿಎಸ್ಎಲ್ ಹಾಗೂ ಅದರ ಹಿಂದಿನ ಪ್ರವರ್ತಕರು ಸಾರ್ವಜನಿಕ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ ಆರೋಪಕ್ಕೆ ಒಳಗಾಗಿದ್ದಾರೆ.
ಜಾರಿ ನಿರ್ದೇಶನಾಲಯ ತನ್ನ ಹೇಳಿಕೆಯಲ್ಲಿ, ಮುಟ್ಟುಗೋಲು ಹಾಕಿಕೊಳ್ಳಲಾದ ಸೊತ್ತುಗಳಲ್ಲಿ ಮಹಾರಾಷ್ಟ್ರದ ರಾಯಗಢದಲ್ಲಿರುವ ಕೃಷಿ ಭೂಮಿ, ಬಿಎಸ್ಎಲ್ನ ಈ ಹಿಂದಿನ ಪ್ರವರ್ತಕರ ನಿಯಂತ್ರಣದಲ್ಲಿದ್ದ ಸಂಸ್ಥೆಗಳ ವೇರ್ಹೌಸ್ಗಳು ಒಳಗೊಂಡಿವೆ ಎಂದು ಈ.ಡಿ.ಯ ಹೇಳಿಕೆ ತಿಳಿಸಿದೆ. 2019ರಲ್ಲಿ ‘ಸೀರಿಯಸ್ ಫ್ರಾರ್ಡ್ಸ್ ಇನ್ವೆಸ್ಟಿಗೇಶನ್ ಆಫೀಸ್’ (ಎಸ್ಎಫ್ಐಒ) ಕಂಪೆನಿ ಕಾಯ್ದೆ -2013 ಹಾಗೂ ಭಾರತೀಯ ದಂಡ ಸಂಹಿತೆ-1860ರ ವಿವಿಧ ನಿಯಮಗಳ ಅಡಿಯಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಭೂಷಣ್ ಸ್ಟೀಲ್ ಹಾಗೂ ಭೂಷಣ್ ಎನರ್ಜಿ ವಿರುದ್ಧ ಹಣ ಅಕ್ರಮ ವರ್ಗಾವಣೆಯ ತನಿಖೆ ಆರಂಭಿಸಿತ್ತು.
ಬಿಎಸ್ಎಲ್ ಹಾಗೂ ಬಿಇಎಲ್ನ ಮಾಜಿ ಪ್ರವರ್ತಕರಾದ ನೀರಜ್ ಸಿಂಘಾಲ್ ಹಾಗೂ ಬಿಬಿ ಸಿಂಘಾಲ್ ಅವರು ಭೂಷಣ್ ಎನರ್ಜಿ ಲಿಮಿಟೆಡ್ನ ಸಹವರ್ತಿ ಕಂಪೆನಿಗಳಿಗೆ ಅಸುರಕ್ಷಿತ ಸಾಲ ನೀಡಲು ಸಾರ್ವಜನಿಕ ಹಣವನ್ನು ಬಳಸಿಕೊಂಡಿರುವುದು ಹಾಗೂ ಅದನ್ನು ಅವರು ಅಂತಿಮವಾಗಿ ವಿವಿಧ ಸ್ಥಿರ ಆಸ್ತಿಗಳನ್ನು ಖರೀದಿಸಲು ಬಳಸಿಕೊಂಡಿರುವುದು ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಪತ್ತೆಯಾಗಿತ್ತು. ನೀರಜ್ ಸಿಂಘಾಲ್ ಹಾಗೂ ಅವರ ತಂದೆ 2013 ಹಾಗೂ 2017ರ ನಡುವೆ ಅಕ್ರಮ ಮಾರ್ಗ ಅನುಸರಿಸಿ ಬ್ಯಾಂಕ್ನಿಂದ 45,800 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ಎಸ್ಎಫ್ಐಒ ಆರೋಪಿಸಿದೆ.
ಈ ಹಣವನ್ನು ಅಕ್ರಮವಾಗಿ 157 ಕಂಪೆನಿಗಳಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ಕನಿಷ್ಠ 62 ಕಂಪೆನಿಗಳು ಸಿಂಘಾಲರ ನೇರ ನಿಯಂತ್ರಣದಲ್ಲಿದ್ದವು. 85 ಕಂಪೆನಿಗಳು ಭೂಷಣ್ ಸಮೂಹದ ಉದ್ಯೋಗಿಗಳ ಮೂಲಕ ನಿರ್ವಹಣೆಯಾಗುತ್ತಿದ್ದವು. ಉಳಿದ ಕಂಪೆನಿಗಳು ಎಂಟ್ರಿ ಆಪರೇಟರ್ಗಳಿಂದ ನಿರ್ವಹಣೆಯಾಗುತ್ತಿದ್ದವು ಎಂದು ಎಸ್ಎಫ್ಐಒ ಹೇಳಿದೆ.