ವಯನಾಡಿನಲ್ಲಿ ಕೇರಳ ಭಯೋತ್ಪಾದನೆ ನಿಗ್ರಹ ಘಟಕದಿಂದ ‘ಹಿರಿಯ ಮಾವೋವಾದಿ ನಾಯಕ’ ಮತ್ತು ‘ಕಮಾಂಡರ್’ನ ಬಂಧನ

ಕೋಝಿಕ್ಕೋಡ್: ಕೇರಳ ಪೊಲೀಸ್ ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿಯಾಗಿರುವ ಹಿರಿಯ ಮಾವೋವಾದಿ ನಾಯಕ ಬಿ.ಜಿ.ಕೃಷ್ಣಮೂರ್ತಿಯವರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
ಮಾವೋವಾದಿ ವಲಯಗಳಲ್ಲಿ ‘ಬಿಜಿಕೆ’ ಎಂದೇ ಪರಿಚಿತರಾಗಿರುವ ಕೃಷ್ಣಮೂರ್ತಿಯವರನ್ನು ಮಂಗಳವಾರ ಸಂಜೆ ವಯನಾಡಿನ ಸುಲ್ತಾನ್ ಬತೇರಿಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಪಿಐ(ಮಾವೋವಾದಿ)ನ ಕಬನಿ ದಳಂ ಕಮಾಂಡರ್ ಸಾವಿತ್ರಿ ಅಲಿಯಾಸ್ ರೆಜಿತಾಳನ್ನೂ ಬಿಜಿಕೆ ಜೊತೆ ಬಂಧಿಸಲಾಗಿದೆ.
ಇತ್ತೀಚಿಗಷ್ಟೇ ಪಕ್ಷದ ಕೇಂದ್ರ ಸಮಿತಿಗೆ ಪದೋನ್ನತಿಗೊಂಡಿದ್ದ ಕೃಷ್ಣಮೂರ್ತಿಯವರ ಬಂಧನ ಪೊಲೀಸರ ಪಾಲಿಗೆ ದೊಡ್ಡ ಸಾಧನೆಯಾಗಿದೆ.
2016, ನವಂಬರ್ ನಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ನಡೆದಿದ್ದ ಎನ್ಕೌಂಟರ್ನಲ್ಲಿ ಕುಪ್ಪು ದೇವರಾಜ ಕೊಲ್ಲಲ್ಪಟ್ಟ ಬಳಿಕ ಬಿಜಿಕೆಯವರನ್ನು ಸಿಪಿಐ (ಮಾವೋವಾದಿ)ನ ಹಂಗಾಮಿ ಕಾರ್ಯದರ್ಶಿಯನ್ನಾಗಿ ಬಡ್ತಿಗೊಳಿಸಲಾಗಿತ್ತು. 2017ರಲ್ಲಿ ನಡೆದಿದ್ದ ವಲಯ ಸಮಿತಿಯ ಸಭೆಯಲ್ಲಿ ಅವರನ್ನು ಹುದ್ದೆಗೆ ಕಾಯಂ ಆಗಿ ನೇಮಕಗೊಳಿಸಲಾಗಿತ್ತು.
ಕರ್ನಾಟಕದ ಶೃಂಗೇರಿ ಮೂಲದ ಬಿಜಿಕೆ ವಿರುದ್ಧ ರಾಜ್ಯದಲ್ಲಿ 50ಕ್ಕೂ ಅಧಿಕ ಪ್ರಕರಣಗಳಿವೆ. 2005ರಲ್ಲಿ ಸಾಕೇತ್ ರಾಜನ್ ಹತ್ಯೆಯ ಮತ್ತು 2006ರಲ್ಲಿ ನಕ್ಸಲ್ ಆಂದೋಲನದಲ್ಲಿ ವಿಭಜನೆಯ ಬಳಿಕ ಅವರು ಕರ್ನಾಟಕದಲ್ಲಿ ಪಕ್ಷದ ನಾಯಕರಾಗಿದ್ದರು.
ಸಾವಿತ್ರಿ ಮಾವೋವಾದಿ ನಾಯಕ ವಿಕ್ರಮ ಗೌಡನ ಪತ್ನಿಯಾಗಿದ್ದಳು. ಈತನೂ ವಯನಾಡ-ಕೋಝಿಕ್ಕೋಡ್ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾವೋವಾದಿಗಳ ಕಬನಿ ದಳಂನಲ್ಲಿದ್ದಾನೆ. ಎರಡು ವರ್ಷಗಳ ಹಿಂದೆ ವಿಕ್ರಮ ಗೌಡನಿಂದ ವಿಚ್ಛೇದನ ಪಡೆಯಲು ಪಕ್ಷವು ಆಕೆಗೆ ಅನುಮತಿಯನ್ನು ನೀಡಿತ್ತು.