ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ರಕ್ಷಿಸಿದ ರೈಲ್ವೆ ಪೊಲೀಸರು

ಶಿವಮೊಗ್ಗ, ನ.10: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದ ಮಹಿಳೆಯೊಬ್ಬರನ್ನು ಶಿವಮೊಗ್ಗ ತಕ್ಷಣ ರೈಲ್ವೆ ಪೊಲೀಸರು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಪ್ರಾಣದ ಹಂಗು ತೊರೆದು ಪೊಲೀಸರು ಮಹಿಳೆಯ ರಕ್ಷಣೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಘಟನೆ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 6:55ಕ್ಕೆಶಿವಮೊಗ್ಗ ನಿಲ್ದಾಣಕ್ಕೆ ಬಂದ ರೈಲು 7:05ಕ್ಕೆನಿಲ್ದಾಣದಿಂದ ಹೊರಟಾಗ ಘಟನೆ ಸಂಭವಿಸಿದೆ.
ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆಯೊಬ್ಬರು ರೈಲು ಏರಿದ್ದರು. ಕೆಲ ನಿಮಿಷಗಳಲ್ಲಿ ರೈಲು ಹೊರಡುತ್ತಿದ್ದಂತೆ ಆಕೆ ಗಾಬರಿಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ಮಹಿಳೆಯ ಕೈ ಹಿಡಿದು ಕೆಳಗಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ರೈಲು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಮಹಿಳೆ ಪ್ಲಾಟ್‌ಫಾರಂಗೆ ಕಾಲಿಟಿದ್ದಾರೆ. ವಿರುದ್ಧ ದಿಕ್ಕಿಗೆ ಮುಖ ಮಾಡಿದ್ದು ಮತ್ತು ಸೀರೆ ಉಟ್ಟಿದ್ದರಿಂದ ಮಹಿಳೆ ಪ್ಲಾಟ್‌ಫಾರಂ ಮೇಲೆ ಬಿದ್ದಿದ್ದಾರೆ. ಇದನ್ನು ತಕ್ಷಣ ಗಮನಿಸಿದ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF)ನ ಸಿಬ್ಬಂದಿ ಜಗದೀಶ್, ರೈಲ್ವೆ ಪೊಲೀಸರಾದ ಅಣ್ಣಪ್ಪ ಎ.ಎಸ್ ಮತ್ತು ಬಿ.ಎಸ್.ಸಂತೋಷ್ ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ: ರೈಲ್ವೆ ಪೊಲೀಸರ ಕಾರ್ಯಕ್ಕೆ ರೈಲ್ವೆ ಇಲಾಖೆ ಮೈಸೂರು ವಿಭಾಗದ ಡಿವಿಷನಲ್ ಮ್ಯಾನೇಜರ್ ರಾಹುಲ್ ಅಗರ್‌ವಾಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







