ಬಿಟ್ ಕಾಯಿನ್ ಹಗರಣ ಮುಖ್ಯಮಂತ್ರಿಯನ್ನು ಬಲಿ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ, ನ.10: ಬಿಟ್ ಕಾಯಿನ್ ಹಗರಣವು ಕರ್ನಾಟಕದ ಮುಖ್ಯಮಂತ್ರಿಯನ್ನು ಖಂಡಿತವಾಗಿ ಬಲಿ ಪಡೆಯಲಿದೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾಗಿರುವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣದ ಪಾರದರ್ಶಕ ತನಿಖೆ ನಡೆಸಿದರೆ ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಒಂದೇ ಒಂದು ತಿಂಗಳಲ್ಲಿ ಹೊರಬರಲಿದೆ. ಆದರೆ, ಸರಕಾರಕ್ಕೆ ಈ ಬಗ್ಗೆ ಆಸಕ್ತಿ ಇದೆಯಾ ಎನ್ನುವುದು ಮುಖ್ಯ ಎಂದು ಹೇಳಿದರು.
ದಲಿತರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ವಿರೋಧಕ್ಷದ ನಾಯಕರಾದ ಸಿದ್ದರಾಮಯ್ಯ ನವರ ವಿರುದ್ದ ಬಿಜೆಪಿ ತೇಜೋವಧೆ ನಡೆಸುತ್ತಿದೆ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ಜನಪರ ಕಾಳಜಿಯುಳ್ಳ ನಾಯಕರಾಗಿದ್ದು, ಅವರು ಸಿಎಂ ಆಗಿದ್ದಾಗ ಶೋಷಿತ ಸಮಾಜದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದರು ಎಂದು ನೆನಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರು, ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಸಿದ್ದು ಪಾಟೀಲ್, ಈರಣ್ಣ ಝಳಕಿ ಮತ್ತಿತರು ಉಪಸ್ಥಿತರಿದ್ದರು.







