ಅಡ್ಕರೆಪಡ್ಪು ಗ್ರೀನ್ ವೀವ್ ಶಿಕ್ಷಣ ಸಂಸ್ಥೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ
ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಬೆಳೆಯಬೇಕು: ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಕೊಣಾಜೆ, ನ.10: ಓದಿನೊಂದಿಗೆ ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಹಾಗೂ ಪ್ರಾಯೋಗಿಕ ಅಧ್ಯಯನಕ್ಕೆ ಒತ್ತುಕೊಟ್ಟು ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಣದೊಂದಿಗೆ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಕೊಣಾಜೆ ಅಡ್ಕರೆಪಡ್ಪುವಿನಲ್ಲಿರುವ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಗ್ರೀನ್ ವೀವ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸರಕಾರದ ಯೋಜನೆಯಾದ 'ಅಟಲ್ ಟಿಂಕರಿಂಗ್ ಲ್ಯಾಬ್' ನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಐಎಎಸ್, ಐಪಿಎಸ್ ಕನಸು ಕಂಡ ವಿದ್ಯಾರ್ಥಿಗಳಲ್ಲಿ ಥಿಯೆರಿ ಬದಲು ಪ್ರಾಕ್ಟಿಕಲ್ ಪ್ರಶ್ನೆಗಳನ್ನು ಮೂಡಿಸುವಂತಹ ಮನೋಭಾವವನ್ನು ಬೆಳಸುವಂತೆ ಮಾಡಬೇಕಿದೆ ಎಂದ ಜಿಲ್ಲಾಧಿಕಾರಿ, ಸರಕಾರದಿಂದ ಲಭಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ ನ ಸದುಪಯೋಗವನ್ನು ವಿದ್ಯಾರ್ಥಿಗಳು ನಡೆಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ ಎಂದರು
ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ ಮಾತನಾಡಿ, ಕೊಣಾಜೆ ವ್ಯಾಪ್ತಿಯಲ್ಲಿರುವ ಈ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣದ ಕೊಡುಗೆಯ ಮೂಲಕ ಮಾದರಿ ಸೇವೆ ನೀಡುತ್ತಿದೆ ಎಂದರು.
ಜಮಿಯ್ಯುತಲ್ ಫಲಾಹ್ ಸಂಸ್ಥೆಯ ಪರ್ವೇಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಕೆಲವೇ ಕೆಲವು ಶಾಲೆಗಳಿಗೆ ಸರಕಾರದ ಈ ಯೋಜನೆ ದೊರಕಿದೆ. ಇದರಿಂದ ಈ ಸಂಸ್ಥೆಗೆ, ನಮಗೆ ಪ್ರಶಸ್ತಿ ಗರಿ ಸಿಕ್ಕಿದಂತಾಗಿದೆ. ಶಾಲೆಯು ಆರಂಭವಾಗಿ 30 ವರ್ಷಗಳು ಕಳೆದಿದ್ದು ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ. ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ಸಂಸ್ಥೆಯು ಮುನ್ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ದ.ಕ.ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಹಾಜಿ ಶಬೀಹ್ ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಫಝ್ಲುಲ್ ರಹೀಮ್, ಕೋಶಾಧಿಕಾರಿ ಎಫ್.ಎಂ.ಬಶೀರ್, ಮುಖ್ಯೋಪಾಧ್ಯಾಯಿನಿ ಎಲ್ವಿನ್ ಪಿ.ಐಮನ್, ಅಡ್ಕರೆಪಡ್ಪು ಮಸೀದಿಯ ಅಧ್ಯಕ್ಷ ಹಮೀದ್, ಟೆಸ್ಕಾಂ ಟೆಕ್ನಾಲಜಿಯ ಸದಕತ್ ಶಾ, ಮಹಮ್ಮದ್ ರಿಯಾಝ್, ಪಂಚಾಯತ್ ಸದಸ್ಯರಾದ ಹೈದರ್, ಫೌಝಿಯಾ, ಝೊಹರಾ, ಅಬ್ದುಲ್ ಖಾದರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಮುಹಮ್ಮದ್, ಅಬೂಬಕರ್, ಸಂಸ್ಥೆಯ ಮಾಜಿ ಸಂಚಾಲಕ ಪಿ.ಬಿ.ಎಚ್. ರಝಾಕ್, ಇಮ್ತಿಯಾಝ್, ನಝೀರ್ ಅಹ್ಮದ್, ಎಂ.ಎಚ್.ಮಲಾರ್, ಶಾಲಾ ಸಮಿತಿಯ ಸಂಚಾಲಕ ಅಹ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಬೂಬಕರ್ ಸ್ಬಾಗತಿಸಿದರು. ರಶ್ಮಿ, ರೆನಿಟಾ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಬಿ.ಎನ್. ವಂದಿಸಿದರು.
ಅಡ್ಕರೆಪಡ್ಪುವಿಗೆ ಸಾರಿಗೆ ವ್ಯವಸ್ಥೆಗೆ ಶೀಘ್ರ ಕ್ರಮ: ಡಿಸಿ ಭರವಸೆ
ಅಡ್ಕರೆಪಡ್ಪು ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಕೇವಲ ಒಂದು ಬಸ್ ಮಾತ್ರ ಸಂಚರಿಸುತ್ತಿದೆ ಎಂದು ಜಮಿಯ್ಯುತುಲ್ ಫಲಾಹ್ ವತಿಯಿಂದ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರರ ಗಮನಸೆಳೆಯಲಾಯಿತು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ, ಅಡ್ಕರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಸುಗಳ ಅಸೋಸಿಯೇಶನ್ ಜೊತೆಗೆ ಚರ್ಚಿಸಿ ಶೀಘ್ರವೇ ಹೆಚ್ಚಿನ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.














.jpeg)



