2002ರ ಗಲಭೆ: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಸುಪ್ರೀಂಕೋರ್ಟ್ನಲ್ಲಿ ವಿರೋಧಿಸಿದ ಝಕಿಯಾ ಜಾಫ್ರಿ

photo: Indian express
ಹೊಸದಿಲ್ಲಿ: 2002ರ ಗುಜರಾತ್ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಸಾಕ್ಷ್ಯಾಧಾರಗಳನ್ನು ನಿರ್ಲಕ್ಷಿಸಿದೆ ಹಾಗೂ ಯಾವುದೇ ತನಿಖೆ ನಡೆಸದೆ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ಗಲಭೆಯಲ್ಲಿ ಹತ್ಯೆಗೀಡಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ಗಲಭೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿರುವ ಎಸ್ ಐಟಿ ಕ್ರಮವನ್ನು ವಿರೋಧಿಸಿದ್ದಾರೆ.
ಎಸ್ಐಟಿ ಹೇಳಿಕೆಗಳನ್ನು ದಾಖಲಿಸಿಲ್ಲ, ಫೋನ್ಗಳನ್ನು ವಶಪಡಿಸಿಕೊಂಡಿಲ್ಲ, ಬಾಂಬ್ಗಳನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ಪರಿಶೀಲಿಸಿಲ್ಲ. ತಕ್ಷಣವೇ ಪ್ರಕರಣದ ಮುಕ್ತಾಯದ ವರದಿಯನ್ನು ಸಲ್ಲಿಸಿದೆ ಎಂದು 81 ವರ್ಷ ವಯಸ್ಸಿನ ಜಾಫ್ರಿ ಪ್ರತಿಪಾದಿಸಿದ್ದಾರೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ತನಿಖಾ ತಂಡ ಕ್ಲೀನ್ ಚಿಟ್ ನೀಡಿದ್ದಕ್ಕೆ ಸವಾಲು ಹಾಕಿದ್ದಾರೆ.
ಸುಮಾರು 20 ವರ್ಷಗಳಿಂದ, ಝಕಿಯಾ ಜಾಫ್ರಿ ನ್ಯಾಯಕ್ಕಾಗಿ ತನ್ನ ಹೋರಾಟವನ್ನು ಮುಂದುವರೆಸಿದ್ದಾರೆ. ಫೆಬ್ರವರಿ 28, 2002 ರಂದು ಅಹಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ಕೊಲ್ಲಲ್ಪಟ್ಟ 68 ಜನರಲ್ಲಿ ಎಹ್ಸಾನ್ ಜಾಫ್ರಿ ಕೂಡ ಒಬ್ಬರು . ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ನ ಎಸ್ -6 ಕೋಚ್ ಅನ್ನು ಸುಟ್ಟು 59 ಜನರನ್ನು ಕೊಂದ ಒಂದು ದಿನ ನಂತರ ಈ ಘಟನೆ ನಡೆದಿತ್ತು.
ಸಿಟ್ ಗಲಭೆ ನಡೆದ ಒಂದು ದಶಕದ ನಂತರ ಫೆಬ್ರವರಿ 2012 ರಲ್ಲಿ ತನ್ನ ಮುಚ್ಚುವಿಕೆಯ ವರದಿಯನ್ನು ಸಲ್ಲಿಸಿತ್ತು "ಯಾವುದೇ ವಿಚಾರಣೆಗೆ ಒಳಪಡುವ ಸಾಕ್ಷ್ಯಗಳಿಲ್ಲ" ಎಂದು ಉಲ್ಲೇಖಿಸಿ ಪ್ರಧಾನಿ ಮೋದಿ ಹಾಗೂ 63 ಇತರರಿಗೆ ಕ್ಲೀನ್ ಚಿಟ್ ನೀಡಿತ್ತು.
ಹಲವು ಬಾರಿ ಮುಂದೂಡಿದ ನಂತರ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. 64 ಮಂದಿಗೆ ಕ್ಲೀನ್ ಚಿಟ್ ನೀಡಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಕ್ತಾಯ ವರದಿ ಹಾಗೂ ಅದನ್ನು ಅಂಗೀಕರಿಸುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೀಯಲ್ ಕೋರ್ಟ್ ನೀಡಿದ ಸಮರ್ಥನೆಯನ್ನು ಪರಿಶೀಲಿಸಲು ಬಯಸುವುದಾಗಿ ಅಕ್ಟೋಬರ್ 26 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.
ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರ ಪೀಠದ ಮುಂದೆ ಝಕಿಯಾ ಜಾಫ್ರಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮತ್ತು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ನಾನು ಕೂಡ "ಕೋಮು ಹಿಂಸಾಚಾರದ ಬಲಿಪಶು" ಹಾಗೂ "ಹಿಂಸಾಚಾರದಲ್ಲಿ ತಾಯಿಯ ಅಜ್ಜಿಯನ್ನು ಕಳೆದುಕೊಂಡಿದ್ದೇನೆ" ಎಂದು ಹೇಳಿದರು. 1947 ರಲ್ಲಿ ಭಾರತದ ವಿಭಜನೆಯ ನಂತರ ಈ ಘಟನೆ ನಡೆದಿತ್ತು.