ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಹೈದರಾಬಾದ್‌ನಿಂದ ಸಾಫ್ಟ್ ವೇರ್ ಇಂಜಿನಿಯರ್ ರಾಮನಾಗೇಶ್ ಬಂಧನ

ಹೊಸದಿಲ್ಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮಗಳಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.
23 ವರ್ಷದ ರಾಮನಾಗೇಶ್ ಶ್ರೀನಿವಾಸ್ ಎಂಬಾತನನ್ನು ಮುಂಬೈ ಪೊಲೀಸರ ವಿಶೇಷ ತಂಡ ಇಂದು ಮಧ್ಯಾಹ್ನ ಬಂಧಿಸಿದೆ. ಪೊಲೀಸರು ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ತನಿಖೆ ಮಾಡಲು ಆರಂಭಿಸಿದ ನಂತರ ರಾಮ್ ನಾಗೇಶ್ ತನ್ನ ಟ್ವಿಟರ್ ಹ್ಯಾಂಡಲ್ ಅನ್ನು ಬದಲಾಯಿಸಿದ್ದ ಮತ್ತು ಪಾಕಿಸ್ತಾನಿ ಬಳಕೆದಾರರಂತೆ ನಟಿಸಿದ್ದ ಎಂದು ಆರೋಪಿಸಲಾಗಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಈತ ಈ ಹಿಂದೆ ಆಹಾರ ವಿತರಣಾ ಅಪ್ಲಿಕೇಶನ್‌ಗಾಗಿ ಕೆಲಸ ಮಾಡಿದ್ದ ಆತನನ್ನು ಮುಂಬೈಗೆ ಕರೆತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 24 ರಂದು ದುಬೈನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಕಾಮೆಂಟ್‌ಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವೇಗದ ಬೌಲರ್ ಮುಹಮ್ಮದ್ ಶಮಿಗೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದರು. ಕೊಹ್ಲಿ ಈ ನಿಂದನೆಗೆ ಆಕ್ರೋಶ ವ್ಯಕ್ತಪಡಿಸಿ ಶಮಿ ಬೆಂಬಲಕ್ಕೆ ನಿಂತಿದ್ದರು. ಆ ನಂತರ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರ ಒಂಬತ್ತು ತಿಂಗಳ ಹೆಣ್ಣುಮಗುವಿಗೆ ಆನ್ ಲೈನ್ ನಲ್ಲಿ ಅತ್ಯಾಚಾರದ ಬೆದರಿಕೆ ಹಾಕಲಾಗಿತ್ತು.