ಚಿಕ್ಕಮಗಳೂರು: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಚಿಕ್ಕಮಗಳೂರು, ನ.10: ನಗರದ ಕರ್ಕಿಪೇಟೆ ಬಡಾವಣೆಯ ಜವರಯ್ಯ ಮತ್ತು ಜಯಮ್ಮ ದಂಪತಿ ಪುತ್ರ ಲೋಕೇಶ್ ಕಳೆದ ವಾರ ಅಪಘಾತಕೀಡಾಗಿ ಮಂಗಳೂರಿನ ಖಾಸಗಿ ಅಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದರಿಂದ ಕುಟುಂಬದವರು ಲೋಕೇಶ್ ಅವರ ಆಸೆಯಂತೆ ಅವರ ಕಣ್ಣುಗಳನ್ನು ದಾನಮಾಡಿದ್ದಾರೆ. ಈ ಮೂಲಕ ಲೋಕೇಶ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಂಗಳವಾರ ಬೆಳಗ್ಗೆ 4.30ಕ್ಕೆ ಕರ್ಕಿಪೇಟೆಯ ಸ್ವಗೃಹಕ್ಕೆ ಮೆದುಳು ನಿಷ್ಕ್ರೀಯಗೊಂಡ ಲೋಕೇಶ್ ಅವರ ದೇಹವನ್ನು ಮಂಗಳೂರಿನಿಂದ ತರಲಾಗಿತ್ತು. ಈ ವೇಳೆ ಕುಟುಂಬದವರು ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಲೋಕೇಶ್ ಕಣ್ಣು ದಾನ ಮಾಡುವ ಆಸೆಯನ್ನು ತಿಳಿಸಿದ್ದು, ತಕ್ಷಣವೇ ಹಿರಿಯ ನೇತ್ರ ತಙ್ಞರಾದ ಡಾ.ಶ್ರೀನಿವಾಸಮೂರ್ತಿ ಅವರು ಸಿಪಾನಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಬಂದು ಶಸ್ತ್ರ ಚಿಕಿತ್ಸೆ ನಡೆಸಿ ಲೋಕೇಶ್ ಅವರ ನೇತ್ರವನ್ನು ಬೆಂಗಳೂರಿಗೆ ರವಾನಿಸಿದರು.
ಪುನೀತ್ ರಾಜ್ ಕುಮಾರ್ ರವರ ನೇತ್ರದಾನದ ಪ್ರೇರಣೆಯಿಂದ ಸಹಸ್ರಾರು ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದು, ಲೋಕೇಶ ಕೂಡ ನೇತ್ರದಾನ ಮಾಡುವ ಮೂಲಕ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ.





