ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಯನ್ನು ಬಂಧಿಸಲು ದಲಿತ್ ಸಂಘರ್ಷ ಸಮಿತಿ ಒತ್ತಾಯ
ಪುತ್ತೂರು ; ಅಪ್ರಾಪ್ತ ಆದಿದ್ರಾವಿಡ ಜನಾಂಗದ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ಸ್ವಯಂಘೋಷಿತ ಸಂಘಟನೆಯ ಅಧ್ಯಕ್ಷ ರಾಜು ಹೊಸ್ಮಠನನ್ನು ತಕ್ಷಣ ಬಂಧಿಸಿ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ್ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಆಗ್ರಹಿಸಿದ್ದಾರೆ.
ಬುಧವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತನ್ನ ಕಚೇರಿಯಲ್ಲಿ 2 ಬಾಲಕಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದು, ಇವರಿಬ್ಬರೂ ಅಕ್ಕ-ತಂಗಿಯಾಗಿದ್ದಾರೆ. ಆರೋಪಿ ವಿರುದ್ಧ ಮಹಿಳಾ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಯನ್ನು ಬಂಧಿಸಿಲ್ಲ. ಮುಂದಿನ 10 ದಿನಗಳ ಒಳಗಾಗಿ ಆರೋಪಿ ರಾಜು ಹೊಸ್ಮಠನನ್ನು ಬಂಧಿಸದಿದ್ದರೆ, ಮಹಿಳಾ ಠಾಣೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈತ ಹುಟ್ಟುಹಾಕಿರುವ ಆಪತ್ಬಾಂಧವ ಟ್ರಸ್ಟ್ ಎಂಬ ಸಂಸ್ಥೆ ಅನಧಿಕೃತವಾಗಿದ್ದಲ್ಲಿ ಕೂಡಲೇ ಇದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈತನ ಮೇಲೆ ಬನ್ನೂರಿನ ಮಹಿಳೆಯೊಬ್ಬರಿಂದ ಹಣ ಪಡೆದ ಪ್ರಕರಣ ಕೂಡಾ ದಾಖಲಾಗಿದ್ದು, ಈ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಪುತ್ತೂರು ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳ ಹೆಚ್ಚಾಗುತ್ತಿದ್ದರೂ ಆದಿದ್ರಾವಿಡ-ಮೊಗೇರ ಸಂಘ ಮೌನ ವಹಿಸುತ್ತಿವೆ. ಆದಿದ್ರಾವಿಡ ಜನಾಂಗಕ್ಕೆ ಸೇರಿದ ಬಾಲಕಿಗೆ ಲೈಂಗಿಕ ಪ್ರಕರಣ ದಾಖಲಾಗಿ 5 ದಿನಗಳಾಗಿವೆ. ಆದರೂ ಆದಿದ್ರಾವಿಡ ಸಂಘಟನೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಪುತ್ತೂರು ಬಡಗನ್ನೂರು ಬಳಿಯಲ್ಲಿ ಕೆಲ ದಿನಗಳ ಹಿಂದೆ ಮೊಗೇರ ಜನಾಂಗದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳ ಮೇಲೆ ಲೈಂಗಿಕ ಪ್ರಕರಣ ನಡೆದಿದೆ. ಈ ವಿಚಾರ ಬಗ್ಗೆಯೂ ಮೊಗೇರ ಸಂಘ ಯಾವುದೇ ಹೇಳಿಕೆ ನೀಡದೆ ಮೌನ ವಹಿಸಿದೆ. ಈ ಸಂಘಟನೆಗಳ ನಡೆಯು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಂತಹ ಜಾತಿ ಸಂಘಟನೆಗಳ ಅಗತ್ಯತೆಯು ಪ್ರಶ್ನಾರ್ಹವಾಗಿದೆ ಎಂದರು.
ಬಡಗನ್ನೂರಿನಲ್ಲಿ ದಲಿತ ಬಾಲಕಿ ಲೈಂಗಿಕ ಪ್ರಕರಣದಲ್ಲಿ ಆರೋಪಿಯಾಗಿರುವ ನಾರಾಯಣ ರೈ ಕೈಯಿಂದ ಕೆಲ ಸಂಘಟನೆಗಳ ಮುಖಂಡರು ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಪುತ್ತೂರು ನಗರ ಸಂಚಾಲಕ ಕೇಶವ ಪಡೀಲ್, ಸಂಚಾಲಕ ಹರೀಶ್ ಬಿ.ಕೆ ಶೇಖಮಲೆ, ಕೋಶಾಧಿಕಾರಿ ಸತೀಶ್ ಶೇಖಮಲೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಶೀನ ಬಾಳಿಲ ಉಪಸ್ಥಿತರಿದ್ದರು.







