ಮಂಗಳೂರು : ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಮಂಗಳೂರು, ನ.10: ನಾಪತ್ತೆಯಾಗಿದ್ದ ಯುವಕನ ಶವ ಶಕ್ತಿನಗರದ ಅಂಚಿ ಕಚೇರಿ ಬಳಿ ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಶಕ್ತಿನಗರದ ಪ್ರಶಾಂತಿನಗರದ ನಿವಾಸಿ ಸದಾನಂದ (31) ಎಂಬವರು ಶವ ಪತ್ತೆಯಾಗಿದೆ. ಅವರು ಒಂದು ವಾರದಿಂದ ನಾಪತ್ತೆಯಾಗಿದ್ದರು. ಮದ್ಯ ಸೇವನೆ ಚಟ ಹೊಂದಿದ್ದ ಸದಾನಂದ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಅಲ್ಲದೆ ಆಗಾಗ ಮನೆ ಬಿಟ್ಟು ಹೋಗುವ ಅಭ್ಯಾಸ ಹೊಂದಿದ್ದ ಕಾರಣ ಮನೆಯವರು ಪೊಲೀಸ್ ದೂರು ನೀಡಲು ಹೋಗಿರಲಿಲ್ಲ. ಸ್ಥಳೀಯರಿಗೆ ಕಳೆದ ಎರಡು ದಿನಗಳಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಹೋಗಿ ನೋಡಿದಾಗ ಕೊಳೆದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಕಾಡು ಬೆಳೆದಿದ್ದ ಕಾರಣ ತಕ್ಷಣ ಯಾರ ಗಮನಕ್ಕೂ ಬಂದಿರಲಿಲ್ಲ. ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಅವರ ಮನೆಯವರು ಆಗಮಿಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.





