ಬೆಂಗಳೂರು: ಲಸಿಕೆ ಕಡ್ಡಾಯದ ವಿರುದ್ಧ ನ.20ರಂದು ಪ್ರತಿಭಟನೆ

ಬೆಂಗಳೂರು, ನ.10: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಒತ್ತಡ ಹೇರುತ್ತಿವೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಲ್ಲದೇ ಲಸಿಕೆ ಪಡೆದುಕೊಂಡವರು ಮರಣಹೊಂದಿದ ದಾಖಲೆಗಳಿವೆ. ಆದುದರಿಂದ ಲಸಿಕೆ ಕಡ್ಡಾಯ ಮಾಡಿರುವುದನ್ನು ವಾಪಸ್ಸು ಪಡೆಯದಿದ್ದರೆ ನ.20ರಂದು ನಗರದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅವೆಕಾನ್ ಇಂಡಿಯಾ ಮೂವ್‍ಮೆಂಟ್‍ನ ಸದಸ್ಯ ಮಂಜುನಾಥ ಭಾಂಬೆರೆ ತಿಳಿಸಿದ್ದಾರೆ.
ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ಸೇರಿದಂತೆ ಕಾಲೇಜುಗಳು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯಗೊಳಿಸಿದೆ. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಗರದ ಆದಿಚುಂಚನಗಿರಿ ವೈದ್ಯಕೀಯ ಸಂಸ್ಥೆಯು ಈ ಕುರಿತು ಅಧಿಸೂಚನೆ ಹೊರಡಿಸಿದೆ. ಅಲ್ಲಿ 3ನೇ ವರ್ಷ ಆಯುರ್ವೇದ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಸುಷ್ಮ, ಎಸ್. ಆರಾಧ್ಯ ಲಸಿಕೆ ಪಡೆಯಲು ಒಪ್ಪದಿದ್ದರೂ, ಕಾಲೇಜು ಆಡಳಿತ ಮಂಡಳಿ ಅವರನ್ನು ಲಸಿಕೆ ಪಡೆಯುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ಲಸಿಕೆಯು ಸಂಪೂರ್ಣ ಸುರಕ್ಷತೆಯಲ್ಲ. ಲಸಿಕೆಯನ್ನು ಪಡೆದ ತಮಿಳು ನಟ ವಿವೇಕ್, ಏಮ್ಸ್ ವೈದ್ಯ ಡಾ. ವಿವೇಕ್ ಸೇರಿದಂತೆ ಮಧ್ಯಮ ವರ್ಗದ ಜನರು ಲಸಿಕೆ ಪಡೆದ ಕೆಲದಿನಗಳಲ್ಲೇ ಮೃತಪಟ್ಟಿದ್ದಾರೆ. ಆದುದರಿಂದ ಲಸಿಕೆ ಕಡ್ಡಾಯವೆಂಬ ನೀತಿಯನ್ನು ಸರಕಾರ ಕೈ ಬಿಡಬೇಕು ಎಂದು ಮನವಿ ಮಾಡಿದರು.







