ಸಂಘ ಪರಿವಾರದ ಬೆದರಿಕೆ: ರಾಯಪುರದ ಕಾರ್ಯಕ್ರಮ ರದ್ದುಗೊಳಿಸಿದ ಮುನವ್ವರ್ ಫಾರೂಕಿ

ಹೊಸದಿಲ್ಲಿ, ನ. 10: ಕಾರ್ಯಕ್ರಮ ಆಯೋಜಕರಿಗೆ ಸಂಘಪರಿವಾರ ಬೆದರಿಕೆ ಒಡ್ಡಿದ ಬಳಿಕ ಕಾಮೆಡಿಯನ್ ಮುನವ್ವರ್ ಫಾರೂಕಿ ಅವರು ಛತ್ತೀಸ್ಗಢದ ರಾಯಪುರದಲ್ಲಿ ನಡೆಯಲಿದ್ದ ಎರಡು ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.
ರಾಯಪುರದಲ್ಲಿ ನವೆಂಬರ್ 14ರಂದು ಮುನವ್ವರ್ ಫಾರೂಕಿ ಅವರ ಎರಡು ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿತ್ತು. ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಬಜರಂಗದಳ ಸೋಮವಾರ ಪೊಲೀಸರಿಗೆ ಪತ್ರ ಬರೆದಿದೆ. ಮುನವ್ವರ್ ಫಾರೂಕಿ ಅವರು ಹಿಂದೂ ದೇವರಾದ ರಾಮ, ಸೀತಾ, ಶಿವ ಹಾಗೂ ಗೋದ್ರಾ ರೈಲು ಅಗ್ನಿ ದುರಂತದಲ್ಲಿ ಮೃತಪಟ್ಟ ಕರ ಸೇವಕರ ಬಗ್ಗೆ ತಮಾಷೆ ಮಾಡುತ್ತಾರೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ
ಮುನವ್ವರ್ ಫಾರೂಕಿ ಅವರ ಪ್ರದರ್ಶನವನ್ನು ಪೊಲೀಸರು ರದ್ದುಪಡಿಸದೇ ಇದ್ದರೆ, ನಾವೇ ರದ್ದುಪಡಿಸುತ್ತೇವೆ. ಇದರಿಂದಾಗುವ ಪರಿಣಾಮಕ್ಕೆ ಆಡಳಿತವೇ ಹೊಣೆಯಾಗಬೇಕಾದೀತು ಎಂದು ಬಜರಂಗದಳ ಎಚ್ಚರಿಸಿದೆ. ವಿಶ್ವಹಿಂದೂ ಪರಿಷದ್ನ ನಾಯಕರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸೋಮವಾರ ಭೇಟಿಯಾಗಿ ಕಾರ್ಯಕ್ರಮ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ‘‘ಫಾರೂಕಿ ಈ ಹಿಂದೆ ನಮ್ಮ ದೇವರ ಬಗ್ಗೆ ತಮಾಷೆ ಮಾಡಿದ್ದಾರೆ. ಇಂತಹ ಹಿಂದೂ ವಿರೋಧಿ ಜನರಿಗೆ ಇಲ್ಲಿ ಅವಕಾಶ ನೀಡಬಾರದು’’ ಎಂದು ವಿಶ್ವಹಿಂದೂ ಪರಿಷತ್ನ ನಾಯಕ ಸಂತೋಷ್ ಚೌಧರಿ ಹೇಳಿದ್ದಾರೆ. ‘‘ಒಂದು ವೇಳೆ ಕಾರ್ಯಕ್ರಮಕ್ಕೆ ಆಡಳಿತ ಅನುಮತಿ ನೀಡಿದರೆ, ಅದುವೇ ಹೊಣೆಯಾಗಬೇಕಾದೀತು. ಯಾಕೆಂದರೆ, ನಾವು ನಮ್ಮದೇ ದಾರಿಯಲ್ಲಿ ಕಾರ್ಯಕ್ರಮವನ್ನು ನಿಲ್ಲಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.





