ಅಧಿಕಾರಕ್ಕೆ ಬಂದರೆ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ಗೌರವ ಧನ: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ, ನ. 9: ಉತ್ತರಪ್ರದೇಶ ಸರಕಾರ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸವನ್ನು ಅವಮಾನಿಸುತ್ತಿದೆ ಎಂದು ಬುಧವಾರ ಆರೋಪಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ, ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಮ್ಮ ಬೇಡಿಕೆಯೊಂದಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಬಯಸಿದ ಆಶಾಕಾರ್ಯಕರ್ತೆಯರ ಮೇಲೆ ಶಹಾಜಹಾನ್ಪುರದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದ ವೀಡಿಯೊವನ್ನು ಪ್ರಿಯಾಂಕಾ ಗಾಂಧಿ ತನ್ನ ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ. ‘‘ಆಶಾ ಕಾರ್ಯಕರ್ತರ ಮೇಲೆ ಉತ್ತರಪ್ರದೇಶ ಸರಕಾರ ನಡೆಸಿದ ಪ್ರತಿ ಹಲ್ಲೆ ಕೂಡ ಅವರು ಮಾಡಿದ ಕೆಲಸಕ್ಕೆ ಅವಮಾನ. ಕೊರೋನ ಸಾಂಕ್ರಾಮಿಕ ರೋಗದ ಸಮಯ ಹಾಗೂ ಇತರ ಸಂದರ್ಭಗಳಲ್ಲಿ ಆಶಾ ಕಾರ್ಯಕರ್ತೆಯರು ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ. ಗೌರವ ಧನ ಅವರ ಹಕ್ಕು . ಅವರ ಬೇಡಿಕೆಯನ್ನು ಆಲಿಸುವುದು ರಾಜ್ಯ ಸರಕಾರದ ಕರ್ತವ್ಯ’’ ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ತಿಳಿಸಿದ್ದಾರೆ. ‘‘ಆಶಾ ಕಾರ್ಯಕರ್ತೆಯರು ಗೌರವಕ್ಕೆ ಅರ್ಹರಾಗಿದ್ದಾರೆ. ಹೋರಾಟದಲ್ಲಿ ನಾನು ಅವರೊಂದಿಗೆ ಇದ್ದೇನೆ’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವ ಹಾಗೂ ಗೌರವ ಧನದ ಹಕ್ಕಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಗೌರವ ಧನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಇನ್ನೊಂದು ಟ್ವೀಟ್ನಲ್ಲಿ ಅವರು ಗೋಶಾಲೆಗಳ ಅವ್ಯವಸ್ಥತೆಯ ಕುರಿತು ಉತ್ತರಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.