ಪತ್ನಿಯ ಹತ್ಯೆ; ದಿಲ್ಲಿ ವಿ.ವಿ. ಸಹಾಯಕ ಪ್ರಾದ್ಯಾಪಕನ ಬಂಧನ

ಹೊಸದಿಲ್ಲಿ, ನ. 9: ಪತ್ನಿ ಪಿಂಕಿಯನ್ನು ಹತ್ಯೆಗೈದ ಪ್ರಕರಣದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಸಹ ಪ್ರಾದ್ಯಾಪಕ ವಿರೇಂದ್ರ ಕುಮಾರ್ ಹಾಗೂ ಅವರ ಸೋದರ ಸಂಬಂಧಿಯನ್ನು ದಿಲ್ಲಿಯ ಪಶ್ಚಿಮ ಸಂತ ನಗರದ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿರೇಂದ್ರ ಕುಮಾರ್ ಅವರ ಮಾಜಿ ಚಾಲಕ ರಾಕೇಶ್ ಅವರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ.
ವಿರೇಂದ್ರ ಕುಮಾರ್ ಅವರ ಪತ್ನಿ ಪಿಂಕಿಯನ್ನು ತಾನು ಹತ್ಯೆಗೈದಿದ್ದೇನೆ ಎಂದು ತಿಳಿಸಿದ ಬಳಿಕ ಪೊಲೀಸರು ಸೋಮವಾರ ಸಂಜೆ ರಾಕೇಶ್ನನ್ನು ಬಂಧಿಸಿದ್ದರು. ಪಿಂಕಿ ಅವರನ್ನು ಬುರಾರಿಯ ಸಂತನಗರದಲ್ಲಿರುವ ಅವರ ಮನೆಯಲ್ಲಿ ವಿದ್ಯುತ್ ಆಘಾತ ನೀಡಿ ಹಾಗೂ ಕತ್ತು ಹಿಸುಕಿ ಹತ್ಯೆಗೈದಿದ್ದೇನೆ. ಚಾಲಕ ಹುದ್ದೆಯಿಂದ ವಜಾಗೊಳಿಸಿರುವುದು ಹಾಗೂ ಮನೆಯಿಂದ ಹೊರ ಹಾಕಿರುವ ಕಾರಣಕ್ಕೆ ಸೇಡು ತೀರಿಸಲು ತಾನು ಪಿಂಕಿಯನ್ನು ಹತ್ಯೆಗೈದೆ ಎಂದು ರಾಕೇಶ್ ಪ್ರತಿಪಾದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿರೇಂದ್ರ ಕುಮಾರ್ ದಿಲ್ಲಿ ವಿಶ್ವವಿದ್ಯಾನಿಲಯದ ರಾಮ್ಜಾಸ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ. ವಿರೇಂದ್ರ ಕುಮಾರ್ ಹಾಗೂ ಪಿಂಕಿ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಹತ್ಯೆಯಲ್ಲಿ ವಿರೇಂದ್ರ ಕುಮಾರ್ ಅವರ ಪಾತ್ರದ ಕುರಿತು ಪೊಲೀಸರ ಪ್ರತ್ಯೇಕ ತಂಡ ತನಿಖೆ ನಡೆಸುತ್ತಿದೆ. ಹತ್ಯೆ ನಡೆಯುವ ಸಂದರ್ಭ ತಾನು ಮನೆಯಲ್ಲಿ ಇರಲಿಲ್ಲ ಎಂದು ವಿರೇಂದ್ರ ಕುಮಾರ್ ಪ್ರತಿಪಾದಿಸಿದ್ದಾರೆ. ಆದರೆ, ಪಿಂಕಿ ಹತ್ಯೆ ಹಿಂದೆ ವಿರೇಂದ್ರ ಕುಮಾರ್ ಪಾತ್ರ ಇರುವ ಬಗ್ಗೆ ಪಿಂಕಿಯ ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.