ಟ್ವೆಂಟಿ-20 ವಿಶ್ವಕಪ್: ನ್ಯೂಝಿಲ್ಯಾಂಡ್ ಮೊದಲ ಬಾರಿ ಫೈನಲ್ ಗೆ
ಡೇರಿಲ್ ಮಿಚೆಲ್ ಆಕರ್ಷಕ ಅರ್ಧಶತಕ

photo: ICC
ಅಬುಧಾಬಿ, ನ.10: ಆರಂಭಿಕ ಬ್ಯಾಟ್ಸ್ ಮನ್ ಡೇರಿಲ್ ಮಿಚೆಲ್(ಔಟಾಗದೆ 72, 47 ಎಸೆತ, 4 ಬೌಂಡರಿ, 4 ಸಿಕ್ಸರ್ ) ಭರ್ಜರಿ ಅರ್ಧಶತಕದ ನೆರವಿನಿಂದ ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ ತಂಡವನ್ನು 5 ವಿಕೆಟ್ ಗಳ ಅಂತರದಿಂದ ಮಣಿಸಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಲ್ಲಿ ಮೊದಲ ಬಾರಿ ಫೈನಲ್ ತಲುಪಿದೆ.
ಬುಧವಾರದ ನಡೆದ ಮೊದಲ ಸೆಮಿ ಫೈನಲ್ ನಲ್ಲಿ ಗೆಲ್ಲಲು 167 ರನ್ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡಿವೊನ್ ಕಾನ್ವೇ(46,38 ಎಸೆತ, 5 ಬೌಂ., 1 ಸಿ.) ಹಾಗೂ ಆಲ್ ರೌಂಡರ್ ಜೇಮ್ಸ್ ನಿಶಾಮ್(27, 11 ಎಸೆತ, 1 ಬೌಂಡರಿ, 3 ಸಿಕ್ಸರ್) ತಂಡದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು.
ಲಿವಿಂಗ್ ಸ್ಟೋನ್(2-22) ಹಾಗೂ ಕ್ರಿಸ್ ವೋಕ್ಸ್(2-36)ತಲಾ ಎರಡು ವಿಕೆಟ್ ಪಡೆದರು.
ನ್ಯೂಝಿಲ್ಯಾಂಡ್ ಈ ಗೆಲುವಿನೊಂದಿಗೆ 2019ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ನ್ಯೂಝಿಲ್ಯಾಂಡ್ ರವಿವಾರ ನಡೆಯಲಿರುವ ಫೈನಲ್ ನಲ್ಲಿ ಎರಡನೇ ಸೆಮಿ ಫೈನಲ್ ವಿಜೇತ ತಂಡವನ್ನು ಎದುರಿಸಲಿದೆ. ಗುರುವಾರ ನಡೆಯಲಿರುವ 2ನೇ ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ಸೆಣಸಾಡಲಿವೆ.
ಕಿವೀಸ್ ಗೆಲುವಿಗೆ ಕೊನೆಯ 30 ಎಸೆತಗಳಲ್ಲಿ 60 ರನ್ ಅಗತ್ಯವಿತ್ತು. ಕ್ರಿಸ್ ಜೋರ್ಡನ್ ಎಸೆದ ಇನಿಂಗ್ಸ್ ನ 17ನೇ ಓವರ್ ನಲ್ಲಿ 23 ರನ್ ಸೇರಿದಂತೆ ಕೇವಲ 11 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 27 ರನ್ ಸೂರೆಗೈದ ಜೇಮ್ಸ್ ನೀಶಾಮ್ ಪಂದ್ಯಕ್ಕೆ ತಿರುವು ನೀಡಿದರು. ಮತ್ತೊಂದೆಡೆ ದಿಟ್ಟ ಹೋರಾಟ ನೀಡಿದ ಮಿಚೆಲ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.







