ಗ್ರಾಹಕರ ಆಯೋಗದಲ್ಲಿ ಖಾಲಿ ಹುದ್ದೆ ಬಗ್ಗೆ ವಾರದೊಳಗೆ ಸ್ಥಿತಿಗತಿ ವರದಿ ಸಲ್ಲಿಸದೇ ಇದ್ದರೆ ದಂಡ: ಸುಪ್ರೀಂ ಎಚ್ಚರಿಕೆ

ಹೊಸದಿಲ್ಲಿ, ನ. 9: ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿರುವ ಖಾಲಿ ಹುದ್ದೆಗಳಿಗೆ ಸಂಬಂಧಿಸಿ ಒಂದು ವಾರಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸಲು ವಿಫಲವಾದರೆ ರಾಜ್ಯಗಳಿಗೆ 1 ಲಕ್ಷ ರೂಪಾಯಿ ಅಥವಾ 2 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಎಚ್ಚರಿಸಿದೆ. ‘‘ಈ ಒಂದು ಭಾಷೆ ಮಾತ್ರ ನಿಮಗೆ ಅರ್ಥವಾಗುವುದಾದರೆ, ನಾವು ಅದನ್ನೇ ಮಾಡುತ್ತೇವೆ. ಅಲ್ಲದೆ, ದಂಡವನ್ನು ಅಧಿಕಾರಿಗಳಿಂದ ಪಡೆಯುತ್ತೇವೆ’’ ಎಂದು ನ್ಯಾಯಾಲಯ ಹೇಳಿದೆ.
ದೇಶಾದ್ಯಂತ ಗ್ರಾಹಕರ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ನಿರ್ವಹಣೆ ಕುರಿತ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಗ್ರಾಹಕರ ರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸುವ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪು ಈಗಾಗಲೇ ಮಾಡಲಾದ ನೇಮಕಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟಂಬರ್ ನ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ನಾಲ್ಕು ವಾರಗಳ ಒಳಗೆ ಶಾಸನಾತ್ಮಕ ಪರಿಣಾಮ ಅಂದಾಜು ವರದಿ ಸಲ್ಲಿಸುವಂತೆ ನ್ಯಾಯಾಲಯ ತಿಳಿಸಿತ್ತು. ಗುಜರಾತ್ ಸ್ಥಿತಿಗತಿ ವರದಿ ಸಲ್ಲಿಸಿಲ್ಲ ಎಂದು ಆ್ಯಮಿಕಸ್ ಕ್ಯೂರಿ ಗೋಪಾಲ್ ಶಂಕರನಾರಾಯಣ ನ್ಯಾಯಾಲಯಕ್ಕೆ ತಿಳಿದರು. ಗೋವಾ, ದಿಲ್ಲಿ, ರಾಜಸ್ಥಾನ, ಕೇರಳ, ಪಂಜಾಬ್, ತೆಲಂಗಾಣ ಹಾಗೂ ಉತ್ತರ ಪ್ರದೇಶಗಳು ಸಿಬ್ಬಂದಿ ಕುರಿತು ಮಾಹಿತಿ ಸಲ್ಲಿಸಿಲ್ಲ ಎಂದೂ ಹೇಳಿದರು. ಬಿಹಾರ್ ಮೂಲಭೂತ ಸೌಕರ್ಯಗಳ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸಿಲ್ಲ ಎಂದು ಅವರು ತಿಳಿಸಿದರು. ‘‘ಎಲ್ಲಿದ್ದಾರೆ ಮುಖ್ಯ ಕಾರ್ಯದರ್ಶಿ?. ನಾವು ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಲು ನೀವು ಬಯಸುತ್ತೀರಾ? ನಮ್ಮ ಆದೇಶವನ್ನು ಪಾಲಿಸಲು ರಾಜ್ಯಗಳನ್ನು ಬಲವಂತಪಡಿಸುವಂತೆ ನೀವು ಆಗ್ರಹಿಸುತ್ತೀರಾ?’’ ಎಂದು ನ್ಯಾಯಾಲಯ ಬುಧವಾರ ಪ್ರಶ್ನಿಸಿತು.